6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ, ಆಗ ಪಾಠ ಕಲಿಸ್ತೀವಿ: ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 30, 2022 | 12:56 PM

ಧರ್ಮ, ಜಾತಿಯ ಆದಾರದ ಮೇಲೆ ಜನರನ್ನು ವಿಭಾಗ ಮಾಡಬೇಕು. ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಬೇಕು ಎನ್ನುವುದು ಬಿಜೆಪಿಯ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.

6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ, ಆಗ ಪಾಠ ಕಲಿಸ್ತೀವಿ: ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Image Credit source: Tv9Kannada
Follow us on

ಚಾಮರಾಜನಗರ: ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಇನ್ನು 6 ತಿಂಗಳಲ್ಲಿ ಸರ್ಕಾರ ಬದಲಾಗಲಿದೆ. ತಾರತಮ್ಯ ಮಾಡುತ್ತಿರುವ ಪೊಲೀಸರಿಗೆ ಆಗ ಬುದ್ಧಿ ಕಲಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು. ಗುಂಡ್ಲುಪೇಟೆಯಲ್ಲಿ ನಡೆದ ಭಾರತ್ ಜೋಡೋ ಸಮಾವೇಶದಲ್ಲಿ ಮಾತನಾಡಿದ ಅವರು, ಬೇರೆ ಯಾವುದೇ ನಾಯಕರು ಈ ರೀತಿಯ ಪಾದಯಾತ್ರೆ ಮಾಡಿಲ್ಲ. ಈ ಪಾದಯಾತ್ರೆ ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನರು ಈಗ ಆತಂಕದ ಪರಿಸ್ಥಿತಿಯಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಅಂಬೇಡ್ಕರ್ ರೂಪಿಸಿರುವ​​ ಸಂವಿಧಾನ ಬೇಡ ಎಂದು ಇವರು ಹಲವು ಬಾರಿ ಹೇಳಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಇವರಿಗೆ ನಂಬಿಕೆ ಇಲ್ಲ. ಬಿಜೆಪಿಯವರಿಗೆ ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು. ಜನರನ್ನ ಇಬ್ಭಾಗ ಮಾಡುವುದೇ ಇವರ ಉದ್ದೇಶ. ಸಂವಿಧಾನ ಉಳಿಸುವ ಕೆಲಸಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಹೇಳಿದರು. ದೇಶದಲ್ಲಿ ಈಗ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಸಂವಿಧಾ‌ನ ಉಳಿಸಲು ನಾವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್​ ಫ್ಲೆಕ್ಸ್​ ಹರಿದು ಹಾಕಿದ್ದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿ ನಾಯಕರು ತಿರುಗಾಡಲು ಕಷ್ಟವಾಗುವಂತೆ ಮಾಡುತ್ತೇವೆ. ಬಿಜೆಪಿಯವರ ಜತೆ ಪೊಲೀಸರು ಶಾಮೀಲಾಗಿದ್ದರೆ ಅವರಿಗೂ ತಕ್ಕ ಪಾಠ ಕಲಿಸುತ್ತೇವೆ. ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ತಕ್ಕ ಪಾಠ ಕಲಿಸುತ್ತೇವೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.

ರಾಹುಲ್ ಗಾಂಧಿ ಅವರು 510 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. ಸ್ವಾತಂತ್ರ್ಯಾನಂತರ ಒಂದೇ ಬಾರಿ ಇಷ್ಟೊಂದು ದೂರವನ್ನು ಪಾದಯಾತ್ರೆ ಬೇರೆ ಯಾವ ನಾಯಕರೂ ಪಕ್ಷವೂ ಕೂಡ ಕ್ರಮಿಸಿಲ್ಲ. ಕೋಮುವಾದಿ ರಾಜಕಾರಣದಿಂದ ಬೇಸತ್ತು ರಾಹುಲ್ ಗಾಂಧಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಸ್ತುತ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಆತಂಕದಲ್ಲಿ ಬದುಕುತ್ತಿದ್ದಾರೆ. ಬಿಜೆಪಿಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡ ಪಕ್ಷ ಅಲ್ಲ. ಬಿಜೆಪಿ ನಾಯಕರು ಹಲವು ಬಾರಿ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಜಾತ್ಯತೀತ ತತ್ವದಲ್ಲಿ ಅವರಿಗೆ ನಂಬಿಕೆ ಇಲ್ಲ ಎಂದು ವಿಷಾದಿಸಿದರು.

ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನ ನಡೆದಿತ್ತು. ಧರ್ಮ, ಜಾತಿಯ ಆದಾರದ ಮೇಲೆ ಜನರನ್ನು ವಿಭಾಗ ಮಾಡಬೇಕು. ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಬೇಕು ಎನ್ನುವುದು ಬಿಜೆಪಿಯ ಉದ್ದೇಶ. ಮೋದಿ ಪ್ರಧಾನಿಯಾದ ಮೇಲೆ ಇದು ಹೆಚ್ಚಾಗುತ್ತಿದೆ. ಸಂವಿಧಾ‌ನ ಉಳಿಸಲು ನಾವು ಎಲ್ಲ ಬಗೆಯ ತ್ಯಾಗಕ್ಕೂ ಸಿದ್ದರಾಗಬೇಕಾಗಿದೆ. ದೇಶದ ವಿವಿಧೆಡೆ ನಾಗರಿಕ ವೇದಿಕೆಗಳೂ ಹೋರಾಡುತ್ತಿವೆ. ಸಿಪಿಐ, ಸಿಪಿಎಂ ಪಕ್ಷಗಳೂ ಕೂಡ ದೇಶ ಉಳಿಸಲು ಟೊಂಕ ಕಟ್ಟಿ ನಿಂತಿವೆ ಎಂದು ಹೇಳಿದರು.

ಬಿಜೆಪಿಗೆ ನಡುಕ

ಭಾರತ್​ ಜೋಡೊ ಯಾತ್ರೆಯಿಂದ ಬಿಜೆಪಿಗೆ ನಡುಕ ಶುರುವಾಗಿದೆ ಎಂದು ‘ಟಿವಿ9’ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಐಕ್ಯತಾ ಯಾತ್ರೆಯಿಂದ ಬಿಜೆಪಿಯವರು ಭಯಭೀತರಾಗಿ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ ಎಂದು ನುಡಿದರು.

ಇದನ್ನೂ ಓದಿ: ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಪುನರುಚ್ಚಾರ

ಇದನ್ನೂ ಓದಿ: Bharat Jodo Yatra: ಕರ್ನಾಟಕಕ್ಕೆ ರಾಹುಲ್ ಗಾಂಧಿ ಪ್ರವೇಶ; ತಮಿಳುನಾಡು ಗಡಿಯಲ್ಲೇ ಸಿದ್ದರಾಮಯ್ಯ ಸ್ವಾಗತ

Published On - 11:18 am, Fri, 30 September 22