Bharat Jodo Yatra: ಕರ್ನಾಟಕಕ್ಕೆ ರಾಹುಲ್ ಗಾಂಧಿ ಪ್ರವೇಶ; ತಮಿಳುನಾಡು ಗಡಿಯಲ್ಲೇ ಸಿದ್ದರಾಮಯ್ಯ ಸ್ವಾಗತ

Rahul Gandhi: ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯದಲ್ಲಿಯೇ ಕಾರು ನಿಲ್ಲಿಸಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಿದರು.

Bharat Jodo Yatra: ಕರ್ನಾಟಕಕ್ಕೆ ರಾಹುಲ್ ಗಾಂಧಿ ಪ್ರವೇಶ; ತಮಿಳುನಾಡು ಗಡಿಯಲ್ಲೇ ಸಿದ್ದರಾಮಯ್ಯ ಸ್ವಾಗತ
ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಸ್ವಾಗತಿಸಿದರು.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 30, 2022 | 9:20 AM


ಚಾಮರಾಜನಗರ: ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಶುಕ್ರವಾರ (ಸೆ 30) ಮುಂಜಾನೆ ಕರ್ನಾಟಕವನ್ನು ಪ್ರವೇಶಿಸಿತು. ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ಗುಡಲೂರಿನಿಂದ ಕರ್ನಾಟಕದ ಗುಂಡ್ಲುಪೇಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  (Rahul Gandhi) ವಾಹನದಲ್ಲಿ ಬಂದರು. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih), ಅರಣ್ಯದಲ್ಲಿಯೇ ಕಾರು ನಿಲ್ಲಿಸಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಿದರು.

ಕಾಂಗ್ರೆಸ್ ನಾಯಕರಿಗೆ ಅರಣ್ಯ ಇಲಾಖೆಯು ಕಾರಿನಲ್ಲಿ ತೆರಳಲು ಅವಕಾಶ ನೀಡಿತ್ತು. ರಾಹುಲ್​ ಗಾಂಧಿ ಮತ್ತು ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಗುಂಡ್ಲುಪೇಟೆಗೆ ಬಂದರು. ರಾಹುಲ್ ಗಾಂಧಿ ಅವರನ್ನು ಕೆಕ್ಕೆನಹಳ್ಳಿಯ ಕರ್ನಾಟಕ ಗಡಿಯಲ್ಲೇ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಸ್ವಾಗತಿಸಿದರು. ಈ ವೇಳೆ ಮಹದೇವಪ್ಪ, ಜಾರ್ಜ್, ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು. ಮತ್ತೊಂದೆಡೆ ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೇದಿಕೆಯ ಬಳಿಯೇ ಕಾಯುತ್ತಿದ್ದರು. ಗುಂಡ್ಲುಪೇಟೆಯಿಂದ ಕೆಕ್ಕೇನಹಳ್ಳಿ ಸುಮಾರು 25 ಕಿಮೀ ದೂರವಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದು ಸುಮಾರು 30 ಸಾವಿರ​ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿದೆ. ವೆಜ್ ಪಲಾವ್, ಅನ್ನ ಸಾಂಬಾರ್, ಜಿಲೇಬಿ, ಹಪ್ಪಳ, ಉಪ್ಪಿನಕಾಯಿ ಸಿದ್ಧವಾಗುತ್ತಿದೆ. ವಿಐಪಿ, ವಿವಿಐಪಿಗಳಿಗೆ ಇದರ ಜೊತೆಗೆ ಶ್ಯಾವಿಗೆ ಪಾಯಸ ಹಾಗೂ ಮುದ್ದೆ ಇರುತ್ತದೆ. ಗುಂಡ್ಲುಪೇಟೆ ಪಟ್ಟಣದ ವೀರನಪುರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11ರಿಂದಲೇ ಊಟದ ಬಡಿಸುವ ಕೆಲಸ ಆರಂಭವಾಗಲಿದೆ.

ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಅದ್ಧೂರಿ ಸ್ವಾಗತ ಕೋರಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು 250 ಗಣ್ಯರು ಪಾಲ್ಗೊಳ್ಳಲುವ ಸಾಧ್ಯತೆಯಿದೆ. ಸ್ವಾಗತದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ, ಅನಂತರ ಭಾರತ್ ಜೋಡೋ ಯಾತ್ರೆಯ ಸಂಚಾರ ಆರಂಭವಾಗಲಿದೆ.

ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸುಮಾರು ನಾಲ್ಕು ಕಿಮೀ ಸಂಚರಿಸಲಿರುವ ಪಾದಯಾತ್ರಿಗಳು ಗುಂಡ್ಲುಪೇಟೆ ತಾಲ್ಲೂಕು ವೀರನಪುರ ಕ್ರಾಸ್ ಬಳಿ ಮಧ್ಯಾಹ್ನದ ಊಟಕ್ಕೆ ನಿಲ್ಲಲಿದ್ದಾರೆ. ಬಳಿಕ ಆದಿವಾಸಿಗಳು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಡಕಳ್ಳಿ ಗೇಟ್​​ನಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದ್ದು, 7 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮ ತಲುಪಲಿದೆ. ಅಲ್ಲಿ ಕರ್ನಾಟಕದ ಮೊದಲ ದಿನದ ಪಾದಯಾತ್ರೆ ಮುಕ್ತಾಯವಾಗುತ್ತದೆ.

ಇಂದಿನ ಪಾದಯಾತ್ರೆಯಲ್ಲಿ ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ. 7 ಕ್ಷೇತ್ರಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada