ಕೊಳ್ಳೇಗಾಲದಲ್ಲಿ ತಯಾರಾಗ್ತಿತ್ತು ಕಚ್ಚಾ ಬಾಂಬ್​: ಹಸುಗಳ ಬಾಯಿ ಛಿದ್ರವಾದ ಬೆನ್ನಲ್ಲೇ ಬಯಲಾಯ್ತು ಅಸಲಿಯತ್ತು

| Updated By: Ganapathi Sharma

Updated on: Feb 26, 2025 | 7:30 AM

ಚಾಮರಾಜನಗರದ ಕಾಡಂಚಿನ ಪ್ರದೇಶದ ಆ ಜನರದ್ದು ಕಚ್ಛಾ ಬಾಂಬ್ ತಯಾರಿ ಮಾಡುವುದೇ ಪೂರ್ಣಾವಧಿ ಕಾಯಕ. ಬೇಕಾಬಿಟ್ಟಿಯಾಗಿ ಸ್ಟೋಟಕಗಳನ್ನು ತಯಾರಿಸುವುದರ ಜತೆಗೆ ಕಂಡ ಕಂಡವರಿಗೆ ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಿದ್ದರು. ಈಗ ಪೊಲೀಸರು ಸ್ಪೋಟಕಗಳನ್ನು ತಯಾರಿಸುತ್ತಿದ್ದವರಿಗೆ ಲಾಳ ಹಾಕಿದ್ದು 10ಕ್ಕೂ ಹೆಚ್ಚು ಕಚ್ಚಾ ಬಾಂಬ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲದಲ್ಲಿ ತಯಾರಾಗ್ತಿತ್ತು ಕಚ್ಚಾ ಬಾಂಬ್​: ಹಸುಗಳ ಬಾಯಿ ಛಿದ್ರವಾದ ಬೆನ್ನಲ್ಲೇ ಬಯಲಾಯ್ತು ಅಸಲಿಯತ್ತು
ಸಾಂದರ್ಭಿಕ ಚಿತ್ರ
Follow us on

ಚಾಮರಾಜನಗರ, ಫೆಬ್ರವರಿ 26: ಗಡಿನಾಡು ಚಾಮರಾಜನಗರದ ಕಾಡಂಚಿನ ಪ್ರದೇಶದಲ್ಲಿ ರೈತರ ದೊಡ್ಡ ಸಮಸ್ಯೆ ಎಂದರೆ, ಅದು ಕಾಡು ಪ್ರಾಣಿಗಳದ್ದು. ಒಂದೆಡೆ ಕಾಡಾನೆ ದಾಳಿಯಾದರೆ ಮತ್ತೊಂದೆಡೆ ಕಾಡುಹಂದಿಗಳ ಉಪಟಳ. ಅತ್ತ ಕಾಡಾನೆಗಳು ಬೆಳೆ ನಾಶ ಪಡಿಸಿದ್ರೆ ಸರ್ಕಾರದಿಂದ ಪರಿಹಾರ ಸಿಗುತ್ತೆ. ಆದ್ರೆ ಕಾಡುಹಂದಿಗಳು ಬೆಳೆ ಹಾನಿ ಮಾಡಿದ್ರೆ ಸರ್ಕಾರದಿಂದ ಯಾವುದೆ ರೀತಿಯ ಪರಿಹಾರಗಳು ಸಿಗೋದಿಲ್ಲ. ಇದರಿಂದ ರೋಸಿ ಹೋಗಿರುವ ಕಾಡಂಚಿನ ಭಾಗದ ರೈತರು ಕಚ್ಚಾ ಬಾಂಬ್, ಅಂದರೆ ಸ್ಫೋಟಕಗಳನ್ನ ಸ್ವತಃ ತಯಾರಿಸುತ್ತಿದ್ದಾರೆ. ಹೀಗೆ ತಯಾರಿಸಿದ ಸ್ಪೋಟಕಗಳನ್ನ ಜಮೀನಿನ ಸುತ್ತಮುತ್ತ ಇಟ್ಟಿರುತ್ತಾರೆ ಇದನ್ನು ತಿನ್ನಲು ಬಂದ ಕಾಡುಹಂದಿಗಳು ಕಚ್ಚಾಬಾಂಬ್ ಸ್ಪೋಟಗೊಂಡು ಸಾವನ್ನಪ್ಪುತ್ತವೆ. ಆದ್ರೆ ಕಾಡುಹಂದಿಗಳ ಬದಲಾಗಿ ಮೇಯಲು ಬಂದ ಹಸುಗಳು ಇದಕ್ಕೆ ಬಾಯಿ ಹಾಕಿ ಸಾವನ್ನಪ್ಪಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದೆ. ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಈಗ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ರಾಮಶೆಟ್ಟಿ ಹಾಗೂ ಸೋಮಣ್ಣ ಎಂಬುವವರನ್ನ ಬಂಧಿಸಿದ್ದಾರೆ.

ಇಬ್ಬರ ಬಂಧನ: ಹತ್ತಕ್ಕೂ ಹೆಚ್ಚು ಕಚ್ಚಾ ಬಾಂಬ್ ವಶ

ಈ ರಾಮಶೆಟ್ಟಿ ಹಾಗೂ ಸೋಮಣ್ಣ ಕೊಳ್ಳೇಗಾಲ ಹನೂರು ಭಾಗದ ರೈತರಿಗೂ ಕಚ್ಚಾ ಬಾಂಬ್ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಆರೋಪಿಗಳ ಬಂಧನ ವೇಳೆ 10 ಕ್ಕೂ ಹೆಚ್ಚು ಕಚ್ಛಾ ಬಾಂಬ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದುವರೆಗೂ ಐದಕ್ಕೂ ಹೆಚ್ಚು ಗೋವುಗಳ ಬಾಯಿಗೆ ಈ ಕಚ್ಚಾ ಬಾಂಬ್​ನಿಂದ ತೀವ್ರ ಹಾನಿಯಾಗಿದ್ದು ಮೂರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಅಮಾಯಕ ಮೂಕ ಪ್ರಾಣಿಗಳ ಸಾವಿಗೆ ಕಾರಣವಾಗಿರುವ ಈ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲೆಂದು ಗೋವುಗಳ ಮಾಲೀಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ, ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ

ಗನ್ ಪೌಡರ್ ಮೂಲಕ ಬೇಕಾಬಿಟ್ಟಿಯಾಗಿ ಸ್ಪೋಟಕಗಳನ್ನ ತಯಾರಿಸಿದವರು ಈಗ ಜೈಲು ಪಾಲಾಗಿದ್ದು, ಇವರು ತಯಾರಿಸಿದ ಕಚ್ಛಾ ಬಾಂಬ್ ಗಳು ಎಲ್ಲೆಲ್ಲಿ ಮಾರಾಟ ಆಗಿವೆ ಎಂಬುದರ ಮಾಹಿತಿಯನ್ನ ಪೊಲೀಸರು ಪಡೆಯುತ್ತಿದ್ದಾರೆ. ಮತ್ತೆ ಯಾವತ್ತೂ ಈ ರೀತಿ ಸ್ಪೋಟಕಗಳನ್ನ ತಯಾರಿಸದಂತೆ ಆರೋಪಿಗಳನ್ನು ಬಂಧಿಸಿ ಸ್ಫೋಟಕ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಂಗ ಬಂಧನಕ್ಕೊಪ್ಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ