ಚಾಮರಾಜನಗರ, ಜುಲೈ 29: ಕಬಿನಿ ಜಲಾಶಯದಿಂದ (Kabini Dam) ಅಪಾರ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡಲಾಗುತ್ತಿರುವುದರಿಂದ ಕೊಳ್ಳೇಗಾಲ (Kollegala) ತಾಲೂಕಿನ ದಾಸನಪುರ ಗ್ರಾಮ ಸೇರಿದಂತೆ 9 ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ಈಗಾಗಲೆ ಹಳೆ ಹಂಪಾಪುರ ಗ್ರಾಮದ ನೂರಾರು ಎಕರೆ ಜಮೀನು ನೀರಿನಲ್ಲಿ ಮುಳುಗಿ ಹೋಗಿದೆ. ಇತ್ತ ದಾಸನಪುರ ಗ್ರಾಮದ ನದಿಯ ತಟದಲ್ಲಿರುವ ದೇವಾಲಯದ ಮೆಟ್ಟಿಲುಗಳು ಸಹ ಮುಳುಗಿ ಹೋಗಿವೆ. ಕಬಿನಿಯಿಂದ ಹೊರ ಹರಿವು ಹೆಚ್ಚಾದರೆ ಕೊಳ್ಳೇಗಾಲ ತಾಲೂಕಿನ 9 ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೆ ಜಿಲ್ಲಾಡಳಿತ ಕೂಡ 28 ಕಡೆ ಕಾಳಜಿ ಕೇಂದ್ರ ತೆರೆಯುವುದಕ್ಕೆ ಸ್ಥಳ ಗುರುತಿಸಿದ್ದು ಗ್ರಾಮಗಳಿಗೆ ನೀರು ನುಗ್ಗಿದರೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾಳಾಗುವ ಸಂಭವ ಇದೆ.
ಇಷ್ಟೆಲ್ಲ ಅವಾಂತರಕ್ಕೆ 9 ಗ್ರಾಮಗಳ ನದಿ ಪಾತ್ರದಲ್ಲಿ ತಡೆಗೋಡೆ ನಿರ್ಮಾಣ ಆಗದೆ ಇರುವುದೆ ಕಾರಣ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸದ್ಯ ಕೆಲ ಹಾಟ್ಸ್ಪಾಟ್ಗಳನ್ನ ಗುರುತಿಸಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಕೊಳ್ಳೆಗಾಲ ತಾಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿಯಾಗಿಲ್ಲ. ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಮೇಲ್ಚಾವಣಿ ಹಾಗೂ ಗೋಡೆಗಳು ಶಿಥಿಲಗೊಂಡಿವೆ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ಥರ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ