ಚಾಮರಾಜನಗರ, ಮೇ.24: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ(Gundlupete)ತಾಲೂಕಿನ ಸುಣ್ಣದಕೇರಿ ಗ್ರಾಮದಲ್ಲಿ ಮಹಿಳೆಯರೆಲ್ಲರೂ ಸೇರಿಕೊಂಡು ಒಂದು ಸ್ವ-ಸಹಾಯ ಸಂಘವನ್ನು ಕಟ್ಟಿಕೊಂಡಿದ್ದರು. ಇದಕ್ಕೆ ಸುನೀತಾ ಎಂಬುವವರು ಅಧ್ಯಕ್ಷರಾಗಿದ್ದರು. ಹೀಗಿರುವಾಗ ಕಳೆದ ವಾರ ಸಂಘದ ಸಭೆಯಿತ್ತು. ನಿಗದಿತ ಸಮಯಕ್ಕೆ ಸದಸ್ಯೆಯರು ಬಾರದ ಕಾರಣ ದಂಡ ವಿಧಿಸಲಾಗಿತ್ತು. ಆದರೆ, ಈವೇಳೆ ಸುನೀತಾರನ್ನ ಬಿಟ್ಟು ಅವರ ಪಕ್ಕದ ಮನೆಯ ಪದ್ಮಾಳಿಗೆ ದಂಡ ಹಾಕಲಾಯ್ತು. ಇದರಿಂದ ರೊಚ್ಚಿಗೆದ್ದ ಪದ್ಮಾ, ಸುನಿತಾಳ ಜೊತೆ ಕಿರಿಕ್ ತೆಗೆದು ಗಲಾಟೆ ಮಾಡಿದ್ದಾರೆ.
ಬಳಿಕ ಪದ್ಮಾಳ ಕುಟುಂಬಸ್ಥರು ಸುನೀತಾ ಮೇಲೆ ಹಲ್ಲೆಗೈದು, ಈಗ ಪ್ರತಿನಿತ್ಯ ಮನೆಯ ಮೇಲೆ ಕಲ್ಲು ಎಸೆಯುತ್ತಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಇನ್ನು ಪದ್ಮಾಳ ಕುಟುಂಬಸ್ಥರು ಬೀದಿಯಲ್ಲಿ ಸುನೀತಾ ಓಡಾಟ ನಡೆಸುವಾಗೆಲ್ಲ, ಪದೇ ಪದೇ ಕಿರಿಕ್ ತೆಗೆದು ಜಗಳ ಮಾಡುತ್ತಿದ್ದು, ಕೊಲೆ ಬೆದರಿಕೆ ಬೇರೆ ಹಾಕಿದ್ದಾರೆ. ಇನ್ನು ಸಾಲದು ಎಂದು ಮನೆ ಮೇಲೆ ಕಲ್ಲು ಎಸೆಯುತ್ತಿದ್ದು, ಹಂಚುಗಳೆಲ್ಲವೂ ಒಡೆದು ಚುರು ಚೂರಾಗಿ ಹೋಗಿದೆ.
ಇದನ್ನೂ ಓದಿ:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ
ಕೇವಲ ಗಲಾಟೆ ವಿಚಾರಕ್ಕೆ ಸಂಬಂಧಪಟ್ಟಂತೆ ಗುಂಡ್ಲುಪೇಟೆ ಪೊಲೀಸರು ಎಫ್ಐಆರ್ ಮಾಡಿಕೊಂಡಿದ್ದು, ಕಲ್ಲು ಎಸೆಯುವ ವಿಚಾರ ತಿಳಿಸಿದರೂ ಕ್ರಮ ಕೈಗೊಂಡಿಲ್ಲವೆಂದು ಸುನೀತಾ ಕುಟುಂಬಸ್ಥರ ಆರೋಪವಾಗಿದೆ. ಪೊಲೀಸರಿಂದ ಭದ್ರತೆ ಸಿಗದ ಪರಿಣಾಮ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ದೂರು ನೀಡಲು ಮುಂದಾಗಿದ್ದಾರೆ.
ಅದೇನೆ ಇರಲಿ ದಂಡ ಹಾಕಿದ ವಿಚಾರಕ್ಕೆ ಶುರುವಾದ ಕಿರಿಕ್, ಈಗ ಬೇರೊಂದು ರೂಪಕ್ಕೆ ತಿರುಗಿದೆ. ಕಲ್ಲೆಟಿನಿಂದ ಮಹಿಳೆಯರು ಬೇಸತ್ತು ಹೋಗಿದ್ದು, ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Fri, 24 May 24