ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಲ್ಲಿ ಗೋಕರ್ಣವೂ ಒಂದು. ಇಲ್ಲಿಯ ಮಹಾಬಲೇಶ್ವರ ದೇವಸ್ಥಾನಕ್ಕೆ ಸಾವಿರಾರು ಜನರು ಆಗಮಿಸಿ ಶಿವನ ದರ್ಶನವನ್ನು ಪಡೆಯುತ್ತಾರೆ. ಅದರಂತೆ ಇಲ್ಲಿಯ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಇಂದು ಎರಡು ಮನೆತನದ ಅರ್ಚಕರ ನಡುವೆ ಗಲಾಟೆಯಾಗಿದೆ.
ಉತ್ತರ ಕನ್ನಡ, ಮೇ.09: ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ(Gokarna Mahabaleshwar Temple)ದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆ ಏಳು ದಿನದವರೆಗೆ ಯಥಾ ಸ್ಥಿತಿ ಮುಂದುವರೆಸುವಂತೆ ಕುಮಟಾ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಎಸಿ ಸೂಚನೆ ಹಿನ್ನೆಲೆ ಜಂಬೆ ಮನೆತನದ ಅರ್ಚಕರು ನಂದಿ ಮಂಟಪದಲ್ಲಿ ತೀರ್ಥ ನೀಡುವ ಕಾಯಕ ಮುಂದುವರೆಸಿದ್ದಾರೆ.
ಎರಡು ಮನೆತನದ ಅರ್ಚಕರ ಮಧ್ಯೆ ಗಲಾಟೆ
ಇನ್ನು ಸಹಾಯಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಭಟನೆಗಿಳಿದಿದ್ದ ಗೋಪಿ ಮನೆತನದ ಅರ್ಚಕರು ಸಧ್ಯ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ವಿಚಾರವಾಗಿ ಜಂಬೆ ಮನೆತನ ಹಾಗೂ ಗೋಪಿ ಮನೆತನದ ನಡುವೆ ಇಂದು(ಮೇ.09) ವಿವಾದ ಏರ್ಪಟ್ಟಿತ್ತು. ನಿಗದಿಯಂತೆ ಜಂಬೆ ಮನೆತನ ಗೋಪಿ ಮನೆತಕ್ಕೆ ತೀರ್ಥ ನೀಡುವ ಕಾಯಕ ವಹಿಸುವಂತೆ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಮನೆತನದ ಅರ್ಚಕರು ಪ್ರತಿಭಟನೆಗಿಳಿದಿದ್ದರು.
ಇದನ್ನೂ ಓದಿ:ಬೇಲೂರು ಚನ್ನಕೇಶವ ದೇಗುಲದಲ್ಲಿ ಭಕ್ತರು, ಆಡಳಿತ ಮಂಡಳಿ ನಡುವೆ ಜಟಾಪಟಿ; ಉತ್ಸವದಲ್ಲಿ ಅಡ್ಡೆಹೊರುವ ಬಗ್ಗೆ ಗಲಾಟೆ
ಈ ಹಿಂದೆ ಕೂಡ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಾಗೂ ಆರತಿ ತಟ್ಟೆಯ ಕಾಸಿನ ಹಕ್ಕಿಗಾಗಿ ಅರ್ಚಕರು ಕೋರ್ಟ್ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಇದೀಗ ತೀರ್ಥ ನೀಡುವ ವಿಚಾರಕ್ಕಾಗಿ ಎರಡು ಮನೆತನದ ನಡುವೆ ಗಲಾಟೆ ಶುರುವಾಗಿದೆ. ಈ ಹಿನ್ನಲೆ ಎಚ್ಚೆತ್ತ ಎಸಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಭಕ್ತರಿಗೆ ದೇವರ ದರ್ಶನಕ್ಕೆ, ಪೂಜೆಗೆ ಅಡ್ಡಿಯಾಗಿದ್ದಂತೆ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ