
ಚಾಮರಾಜನಗರ, ಮೇ 10: ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ನರಭಕ್ಷಕ ಚಿರತೆಯ (Cheetah) ಅಟ್ಟಹಾಸ ಹೆಚ್ಚಾಗಿದೆ. ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದವು. ಈಗ ಮತ್ತೊಮ್ಮೆ ಅಂತದ್ದೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರು ಮೂಲದ ಎಂಟು ವರ್ಷದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯು ದೇವರ ದರ್ಶನಕ್ಕೆ ತೆರಳುವವರಲ್ಲಿ ಭಯ ಹುಟ್ಟಿಸಿದೆ.
ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆಯು ಬಾಲಕನ ರಕ್ತ ಹೀರಿ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.
ಇದನ್ನೂ ಓದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಚಾಮರಾಜನಗರ ಜಿಲ್ಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಭಾಗಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೊಸದೇನಲ್ಲ. ಇದೇ ಜನವರಿ 21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದರು. ಇದಾದ ಬೆನ್ನಲ್ಲೇ ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ (8) ಎಂಬ ಬಾಲಕನ ಮೇಲೆಯೂ ಇದೇ ಮಾರ್ಗದಲ್ಲಿ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈ ಹಿಂದೆ ಟಿ. ನರಸೀಪುರ ಮತ್ತು ಹನೂರು ಭಾಗಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದು, ಅರಣ್ಯ ಇಲಾಖೆ ‘ಲೆಪರ್ಡ್ ಟಾಸ್ಕ್ ಫೋರ್ಸ್’ ಮೂಲಕ ಕಾರ್ಯಾಚರಣೆ ನಡೆಸಿ ನರಭಕ್ಷಕ ಚಿರತೆಗಳನ್ನು ಸೆರೆಹಿಡಿದಿತ್ತು. ಇದೆಲ್ಲದರ ಬೆನ್ನಲ್ಲೇ ಮತ್ತೊಮ್ಮೆ ಇದೇ ಮಾರ್ಗದಲ್ಲಿ ಚಿರತೆ ಬಾಲಕನನ್ನು ಭಕ್ಷಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ಸೂಕ್ತ ರಕ್ಷಣೆ ನೀಡಿಲ್ಲ ಎಂದು ಸ್ಥಳೀಯರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಮಾರ್ಗದಲ್ಲಿ ಪಾದಯಾತ್ರೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Sun, 10 May 26