ಹೊಸ ರೂಲ್ಸ್: ಮಲೆ ಮಹದೇಶ್ವರಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ಮಹತ್ವದ ಸೂಚನೆ
ಮಲೆ ಮಹದೇಶ್ವರಬೆಟ್ಟದಲ್ಲಿ ಚಿರತೆ ದಾಳಿಯಿಂದ ಭಕ್ತ ಪ್ರವೀಣ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಮಹದೇಶ್ವರಬೆಟ್ಟಕ್ಕೆ ಪಾದಯಾತ್ರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕಾಡುಪ್ರಾಣಿಗಳ ಉಪಟಳದಿಂದ ಭಕ್ತರ ಸುರಕ್ಷತೆ ಖಾತ್ರಿಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಚಾಮರಾಜನಗರ, ಜನವರಿ 23: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಚಿರತೆ (Leopard) ದಾಳಿಗೆ ಭಕ್ತ (Devotees) ಪ್ರವೀಣ್ ಬಲಿ ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಪಾದಯಾತ್ರಿಗಳಿಗೆ ಹೊಸ ನಿಯಮ ಜಾರಿ ಮಾಡಿದೆ. ಇನ್ಮುಂದೆ ರಾತ್ರಿ ವೇಳೆ ಬೆಟ್ಟಕ್ಕೆ ಪಾದಯಾತ್ರೆಗೆ ನಿರ್ಬಂಧ ಹೇರಲಾಗಿದೆ. ಕಾಡುಪ್ರಾಣಿಗಳ ಕಾಟ ಹಿನ್ನೆಲೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆ ನಿರ್ಬಂಧಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಘಟನೆ ಹಿನ್ನೆಲೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಟಿವಿ9 ಕೂಡ ಕೆಲ ಹಿಂದೆಯೇ ಸುದ್ದಿ ಬಿತ್ತರಿಸಿತ್ತು. ಆದರೆ ಎಚ್ಚೆತ್ತುಕೊಳ್ಳದ ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಅದರ ಪರಿಣಾವೇ ಮಾದಪ್ಪನ ಭಕ್ತ ಬಲಿಯಾಗಿದ್ದ. ಮಂಡ್ಯದ ಚೀರನಹಳ್ಳಿ ಮೂಲದ ಪ್ರವೀಣ್ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ತೆರಳುವಾಗ ಚಿರತೆ ದಾಳಿ ನಡೆಸಿ ಕೊಂದು ತಿಂದಿತ್ತು.
ಇದನ್ನೂ ಓದಿ: ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ
ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಗೆ ತೆರಳುತ್ತಿದ್ದರು. ಪ್ರವೀಣ್ ಕುಮಾರ್ ಸಂಜೀವ್ ಸೇರಿ 5 ಜನರು ಪ್ರತ್ಯೇಕ ತಂಡದಲ್ಲಿದ್ದರು. ಜನವರಿ 21ರ ಮುಂಜಾನೆ 6ಗಂಟೆ ಸುಮಾರಿಗೆ ರಂಗಸ್ವಾಮಿ ದಿಬ್ಬದ ಬಳಿ ನಡೆದು ಕೊಂಡು ಬರುವಾಗ ಚಿರತೆ ಎದುರಾಗಿದೆ. ಎಲ್ಲರೂ ಕೂಗಿಕೊಂಡು ಇಳಿಜಾರಿನ ಕಡೆ ಓಡಿದ್ದಾರೆ.
ಇದನ್ನೂ ಓದಿ: ಮಾದಪ್ಪನ ಭಕ್ತರಿಗೂ ಚಿರತೆ ಕಾಟ: ರಸ್ತೆಯ ಬದಿಯೇ ಸೇತುವೆ ಮೇಲೆ ಕುಳಿತ ಚಿರತೆ! ಪಾದಯಾತ್ರೆ ಬರುವ ಭಕ್ತರೇ ಎಚ್ಚರ
ಪ್ರವೀಣ್ ದಿಬ್ಬದ ಮೇಲೆ ಓಡಿ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ಚಿರತೆ ಪ್ರವೀಣ್ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದುಕೊಂಡು ಹೋಗಿತ್ತು. ಇನ್ನು ಯಾರಿಗಾದ್ರು ವಿಚಾರ ತಿಳಿಸೋಣ ಅಂದ್ರೆ ನೆಟ್ವರ್ಕ್ ಇಲ್ಲ. ಅದೇಗೊ ಓಡಿಕೊಂಡು ಹೋಗಿ ನೆಟ್ವರ್ಕ್ ಸಿಗುವ ಜಾಗದಲ್ಲಿ ಪೊಲೀಸರಿಗೆ ಸ್ನೇಹಿತರು ಮಾಹಿತಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಈಗ ಪ್ರವೀಣ್ ಮೃತದೇಹವನ್ನು ಪತ್ತೆ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.