AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾರ್ಜಿಲಿಂಗ್‌ನಲ್ಲಿ ನಡೆದ ಸಂತಾಲ್ ಸಮ್ಮೇಳನದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮತ್ತು ಸ್ಥಳ ಬದಲಾವಣೆಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರ ಗೈರುಹಾಜರಿ ಬಗ್ಗೆ ಪ್ರಶ್ನಿಸಿದ್ದಾರೆ. ಈ ಘಟನೆಯ ಕುರಿತು ಕೇಂದ್ರ ಗೃಹ ಕಾರ್ಯದರ್ಶಿಯವರು ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿ ಕೋರಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೂಡ ಟಿಎಂಸಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು ಎಂದಿದ್ದಾರೆ.

ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ
ಮಮತಾ
ನಯನಾ ರಾಜೀವ್
|

Updated on:Mar 08, 2026 | 12:26 PM

Share

ಕೋಲ್ಕತ್ತಾ, ಮಾರ್ಚ್​ 08: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi murmu) ಅವರನ್ನು ಸ್ವಾಗತಿಸುವ ಶಿಷ್ಟಾಚಾರದಲ್ಲಿನ ಲೋಪಗಳು, ಡಾರ್ಜಿಲಿಂಗ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ಸಂಬಂಧಿತ ವ್ಯವಸ್ಥೆಗಳ ಕುರಿತು ಇಂದು(ಮಾರ್ಚ್​8) ಸಂಜೆ 5 ಗಂಟೆಯ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತರ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಬಂದಿರಲಿಲ್ಲ.

ಇದನ್ನು ಪ್ರಶ್ನಿಸಿದ ರಾಷ್ಟ್ರಪತಿ ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದಿ: ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರ

ರಾಷ್ಟ್ರಪತಿಗಳ ಈ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಟಿಎಂಸಿ ಸರ್ಕಾರವು ಸಂತಾಲ್ ಸಂಸ್ಕೃತಿಯನ್ನು ಅತ್ಯಂತ ಹಗುರವಾಗಿ ಕಾಣುತ್ತಿದೆ ಮತ್ತು ರಾಷ್ಟ್ರಪತಿಗಳಿಗೆ ಅವಮಾನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ, ಟಿಎಂಸಿ ವರ್ತನೆಯು ಅರಾಜಕತೆಯ ಹೊಸ ಕೀಳುಮಟ್ಟವನ್ನು ತಲುಪಿದೆ ಎಂದು ಟೀಕಿಸಿದ್ದಾರೆ.

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ರಾಷ್ಟ್ರಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:25 pm, Sun, 8 March 26

Follow Us