AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತನೋರ್ವ ಚಾಮರಾಜನಗರದ ತಾಳಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಚಿರತೆ ದಾಳಿ ಬಳಿಕ ನಾಪತ್ತೆಯಾಗಿದ್ದ ಪ್ರವೀಣ್ ಶವ ಸುಮಾರು 1 ಕಿ.ಮೀ. ಕಾಡಿನೊಳಗೆ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಚಿರತೆ ಕೂತಿತ್ತು ಎನ್ನಲಾಗಿದ್ದು, ಚಿರತೆ ಸೆರೆಹಿಡಿಯುವವರೆಗೂ 4 ದಿನಗಳ ಕಾಲ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ
ಚಿರತೆ ದಾಳಿಗೆ ಬಲಿಯಾದ ಪ್ರವೀಣ್​​
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Jan 21, 2026 | 4:03 PM

Share

ಚಾಮರಾಜನಗರ, ಜನವರಿ 21: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್​ ಮೃತ ದುರ್ದೈವಿಯಾಗಿದ್ದು, ತಡರಾತ್ರಿ ತಾಳ ಬೆಟ್ಟದ ಬಳಿ ಪೂಜೆ ಸಲ್ಲಿಸಿ ತೆರಳುವಾಗ ಚಿರತೆ ದಾಳಿ ನಡೆಸಿದೆ.  ಪಾದಯಾತ್ರೆ ಹೊರಟಿದ್ದ ಐವರು  ತೆರಳುವಾಗ ತಡೆಗೋಡೆ ಮೇಲೆ ಕುಳಿತಿದ್ದ ಚಿರತೆ ನೋಡಿ ಬೆಚ್ಚಿ ಬಿದ್ದಿದ್ದಿದ್ದಾರೆ. ಗಾಬರಿಯಿಂದ ಓಡಿ ಹೋಗುವಾಗ ಪ್ರವೀಣ್ ನಾಪತ್ತೆಯಾಗಿದ್ದ. ತಡೆಗೋಡೆಯಿಂದ ಕೆಳಗೆ ಬಿದ್ನಾ, ಇಲ್ಲ ಚಿರತೆ ದಾಳಿ ಮಾಡಿದೆಯಾ? ಎಂಬ ಅನುಮಾನ ಆರಂಭದಲ್ಲಿ ಮೂಡಿತ್ತು. ಆದರೆ ಅಂತಿಮವಾಗಿ ಚಿರತೆ ದಾಳಿಗೆ ಆತ ಬಲಿಯಾಗಿರೋದು ದೃಢಪಟ್ಟಿದೆ.

ಶವದ ಪಕ್ಕವೇ ಕುಳಿತಿದ್ದ ನರಭಕ್ಷಕ ಚಿರತೆ

ತಾಳಬೆಟ್ಟದ ಕಂದಕದಲ್ಲಿ ಪ್ರವೀಣ್ ಶವ ಪತ್ತೆಯಾಗಿದ್ದು, ಮಾದಪ್ಪನ ಭಕ್ತನ ಕೊಂದ ನರಭಕ್ಷಕ ಚಿರತೆ ಆತನ ರಕ್ತ ಹೀರಿದೆ. ಸುಮಾರು 1 ಕಿ.ಮೀ. ಕಾಡಿನೊಳಗೆ ಚಿರತೆ ಶವ ಎಳೆದುಕೊಂಡು ಹೋಗಿದ್ದು, ಶವ ಪತ್ತೆ ವೇಳೆಯೂ ಪ್ರವೀಣ್ ಮೃತದೇಹದ ಪಕ್ಕದಲ್ಲೇ ಕುಳಿತಿತ್ತು. ಹೀಗಾಗಿ ಶವ ಹೊರತೆಗೆಯಲು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪಟಾಕಿ ಸಿಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಓಡಿಸಿದ್ದು, ಸದ್ಯ ಮರಣೋತ್ತರ ಪರೀಕ್ಷೆಗಾಗಿ ಹನೂರು ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಬೆಳಗಿನ ಜಾವ 5.30ಕ್ಕೆ ತೆರಳುವಂತೆ ನಮಗೆ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ನಾವು 6 ಗಂಟೆ ವೇಳೆಗೆ ಹೋಗುತ್ತಿದ್ದ ವೇಳೆ ಚಿರತೆ ಕಾಣಿಸಿದ್ದು, ಸ್ಥಳದಿಂದ ಓಡಲು ಆರಂಭಿಸಿದ್ದೆವು. ಚಿರತೆ ಚಿರತೆ ಎಂದು ಕಿರುಚಾಡಿದ್ದೆವು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮೇಲೆ ‌ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ 

ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಭಕ್ತ ಪ್ರವೀಣ್ ಬಲಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 4 ದಿನಗಳ ಕಾಲ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಅರಣ್ಯಾಧಿಕಾರಿಗಳು ಆದೇಶಿಸಿದ್ದಾರೆ. ಚಿರತೆ ಹಿಡಿಯುವವರೆಗೆ 4 ದಿನಗಳ ಕಾಲ ಪಾದಯಾತ್ರೆ ನಿರ್ಬಂಧ ಇರಲಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ತಾಳಬೆಟ್ಟ ಪ್ರದೇಶದಲ್ಲಿ ಚಿರತೆ ಕೆಲ ದಿನಗಳ ಹಿಂದೆಯೂ ಕಾಣಿಸಿಕೊಂಡಿತ್ತು. ರಸ್ತೆಯ ಬದಿಯಲ್ಲೇ ಇರುವ ಸೇತುವೆ ಮೇಲೆ ಚಿರತೆ ಗಂಟೆಗಟ್ಟಲೆ ಕುಳಿತ ದೃಶ್ಯವನ್ನು ಭಕ್ತರು ಮೊಬೈಲ್​​ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲೇ ಆಗಮಿಸುವುದರಿಂದ ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.