ಪ್ರಯಾಣಿಕರ ಗಮನಕ್ಕೆ: ಚಾಮರಾಜನಗರ ಜನತೆಗೆ ಎದುರಾಗಲಿದೆ KSRTC ಬಸ್ ಸಮಸ್ಯೆ, ಕಾರಣವೇನು?

| Updated By: ವಿವೇಕ ಬಿರಾದಾರ

Updated on: Aug 29, 2023 | 3:17 PM

ಬುಧವಾರ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಘಟಕ ಒಂದರಿಂದಲೇ ನೂರಾರು ಕೆಎಸ್​ಆರ್​ಟಿಸಿ ಬಸ್​ಗಳನ್ನು ಬುಕ್​ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಿದ್ದರೇ ಯಾವ ಯಾವ ಡಿಪೋ ಬಸ್​ಗಳನ್ನು ಬುಕ್​ ಮಾಡಲಾಗಿದೆ. ಇಲ್ಲಿದೆ ಓದಿ

ಪ್ರಯಾಣಿಕರ ಗಮನಕ್ಕೆ: ಚಾಮರಾಜನಗರ ಜನತೆಗೆ ಎದುರಾಗಲಿದೆ KSRTC ಬಸ್ ಸಮಸ್ಯೆ, ಕಾರಣವೇನು?
ಚಾಮರಾಜನಗರ ಕೆಸ್​ಆರ್​ಟಿಸಿ ಬಸ್​ ನಿಲ್ದಾಣ
Follow us on

ಚಾಮರಾಜನಗರ: ಪ್ರಯಾಣಿಕರು ನಾಳೆ (ಆ.30) ರಂದು ಜಿಲ್ಲೆಯಿಂದ ದೂರದ ಊರಿಗೆ ಪ್ರಯಾಣ ಬೆಳಸುವ ಪ್ಲಾನ್ ಮಾಡುವ ಮುನ್ನ ಒಂದು ಬಾರಿ ಬಸ್​ಗಳ ಸೌಲಭ್ಯದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ನಾಳೆಯ ನಿಮ್ಮ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ (KSRTC) ಬಸ್​​ಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಹಾಗೇ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು (Students) ಕೂಡ ಬಸ್ ಕೊರತೆಯಿಂದ ಪರದಾಡುವಂತಾಗಬಹದು. ಹೌದು ಬುಧವಾರ ಮೈಸೂರಿನಲ್ಲಿ (Mysore) ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಘಟಕ ಒಂದರಿಂದಲೇ ಬರೋಬ್ಬರಿ 310 ಬಸ್​ಗಳನ್ನು ಬುಕ್​ ಮಾಡಲಾಗಿದೆ. ಈ 310 ಬಸ್​ಗಳಲ್ಲಿ ಯೋಜನೆಯ ಅರ್ಹ ಪಲಾನುಭವಿ ಮಹಿಳೆಯರನ್ನು ಮೈಸೂರಿಗೆ ಕರೆದೊಯ್ಯಲು 260 ಬಸ್​​ಗಳನ್ನು ಬುಕ್​​​​ ಮಾಡಲಾಗಿದೆ.

ಇನ್ನುಳಿದ 50 ಬಸ್​​ಗಳಲ್ಲಿ ಕೆಎಸ್​ಆರ್​​ಪಿ ತುಕುಡಿ, ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಕೆಎಸ್​ಆರ್​​​ಟಿಸಿಯ ಚಾಮರಾಜನಗರ ಜಿಲ್ಲಾ ಘಟಕದಲ್ಲಿ ಕೇವಲ 507 ಬಸ್​ಗಳಿದ್ದು, ಈ ಪೈಕಿ 310 ಕೆಎಸ್​ಆರ್​ಟಿಸಿ ಬಸ್​ಗಳು ಗೃಹಲಕ್ಷ್ಮೀ ಕಾರ್ಯಕ್ರಮಕ್ಕೆ ತೆರಳಲಿವೆ.

ಇದನ್ನೂ ಓದಿ: ಚಾಮರಾಜನಗರ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ಬಿದ್ದು ಮಹಿಳೆ ಸಾವು

ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ ಹಾಗೂ ನಂಜನಗೂಡು ಘಟಕದಿಂದ ಬಸ್​ಗಳು ತೆರಳಲಿದ್ದು, ಸಾರ್ವಜನಿಕರ ಸಂಚಾರಕ್ಕೆ ಕೇವಲ 190 ಬಸ್​ಗಳು ಮಾತ್ರ ಲಭ್ಯವಿರುತ್ತವೆ. ನಾಳೆ ಸಂಚಾರಕ್ಕೆ ಬಸ್ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಚಾಮರಾಜನಗರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಗಳಲ್ಲಿ “ಬುಧವಾರ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ” ಮೈಕ್​ನಲ್ಲಿ ಸಾರಿಗೆ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಈ ಕುರಿತು ಕೆ.ಎಸ್.ಆರ್.ಟಿ.ಸಿ ಡಿಸಿ ಅಶೋಕ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ