ಪ್ರಧಾನಿ ಮೋದಿ ಮನಗೆದ್ದ ಕೊಳ್ಳೆಗಾಲದ ಕವಿ ಮಂಜುನಾಥ್​ಗೆ ಗಣರಾಜ್ಯೋತ್ಸವದ ಆಹ್ವಾನ

| Updated By: Rakesh Nayak Manchi

Updated on: Jan 19, 2024 | 12:46 PM

ಗಣರಾಜ್ಯೋತ್ಸವಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜಾಗುತ್ತಿದ್ದು, ಈ ಬಾರಿ ದೇಶದ 1500 ರೈತ ದಂಪತಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಕೇವಲ ರೈತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿ ರೈತ ದಂಪತಿಗೆ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ. ಇದರ ಜೊತೆಗೆ ಲಾಲಿ ಹಾಡು ಹಾಡಿ ಮೋದಿ ಅವರ ಮನ ಗೆದ್ದಿದ್ದ ಚಾಮರಾಜನಗರದ ಕವಿ ಮಂಜುನಾಥ್ ಅವರಿಗೂ ಆಹ್ವಾನ ನೀಡಲಾಗಿದೆ.

ಪ್ರಧಾನಿ ಮೋದಿ ಮನಗೆದ್ದ ಕೊಳ್ಳೆಗಾಲದ ಕವಿ ಮಂಜುನಾಥ್​ಗೆ ಗಣರಾಜ್ಯೋತ್ಸವದ ಆಹ್ವಾನ
ಮೋದಿ ಮನಗೆದ್ದ ಕೊಳ್ಳೆಗಾಲದ ಕವಿ ಮಂಜುನಾಥ್​ ಅವರಿಗೆ ಗಣರಾಜ್ಯೋತ್ಸವದ ಆಹ್ವಾನ ನೀಡಿದ ಕೇಂದ್ರ ಸರ್ಕಾರ
Follow us on

ಚಾಮರಾಜನಗರ, ಜ.19: ಲಾಲಿ ಹಾಡು ಹಾಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮನ ಗೆದ್ದಿದ್ದ ಚಾಮರಾಜನಗರದ ಕವಿ ಮಂಜುನಾಥ್ ಅವರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವಕ್ಕೆ (Republic Day) ಆಹ್ವಾನ ನೀಡಿದೆ. ಮಾತ್ರವಲ್ಲದೆ, ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ದಂಪತಿಗೂ ಆಹ್ವಾನ ನೀಡಲಾಗಿದೆ. 1500 ರೈತ ದಂಪತಿಗಳಿಗೆ ಆಹ್ವಾನ ನೀಡಲಾಗಿದೆ. ಕಳೆದ ಬಾರಿ ಕೇವಲ ರೈತರಿಗಷ್ಟೇ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿತ್ತು.

ವೃತ್ತಿಯಲ್ಲಿ ಎಲ್ಐಸಿ ವಿಮಾ ಪಾಲಿಸಿದಾರನಾಗಿರುವ ಕೊಳ್ಳೆಗಾಲ ಕವಿ ಮಂಜುನಾಥ್ ಅವರು ಕೋವಿಡ್ ವೇಳೆ ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ ಎಂಬ ಸಾಲಿನಿಂದ ಜೋಗುಳ ಪದ ರಚಿಸಿದ್ದರು.

ಅಷ್ಟೇ ಅಲ್ಲದೆ, ಆನ್​ಲೈನ್​ನಲ್ಲಿ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪುತ್ರನ ಒತ್ತಾಸೆಗೆ ಮಂಜುನಾಥ್ ಅವರು ಜೋಗುಳದ ಹಾಡು ರಚಿಸಿ ಹಾಡಿದ್ದರು. ಈ ಲೋರಿ ಹಾಡನ್ನು (ಲಾಲಿ ಹಾಡು) ಕೇಳಿದ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಈ ಹಾಡು ಕೇಳಿದ್ದೇನೆ, ನೀವೂ ಕೇಳಿ ಎಂದು ಮೋದಿ ಪ್ರಸ್ತಾಪಿಸಿದ್ದ ವೇಳೆ ಈ ರಚನೆಗೆ ಮನ್ ಕಿ ಬಾತ್ ಯುವ ಗಾಯಕರು ಧ್ವನಿ ನೀಡಿದ್ದರು.

ಇದನ್ನೂ ಓದಿ: ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಈ ಲಾಲಿ ಹಾಡಿಗೆ ಆರು ಲಕ್ಷ ನಗದು ಬಹುಮಾನದ ಮನ್ನಣೆ ಕೂಡ ಸಿಕ್ಕಿತ್ತು. ಸದ್ಯ, ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕವಿ ಮಂಜುನಾಥ್ ಅವರು ಪಡೆದಿದ್ದು, ಕೇಂದ್ರ ಸರ್ಕಾರವು ಟಿಕೆಟ್ ಬುಕ್ ಕೂಡ ಮಾಡಿದೆ. ಪತಿ ಮಂಜುನಾಥ್ ಜೊತೆ ಪತ್ನಿ ಕೂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೈತ ದಂಪತಿಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ರೈತ ದಂಪತಿಗಳಿಗೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಭೋಜನಕೂಟ ಆಯೋಜನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ