ಚಾಮರಾಜನಗರ: ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ ದಿ ಎಲೆಫೆಂಟ್ ವಿಸ್ಪರರ್ಸ್(The Elephant Whisperers) ಸಿನಿಮಾವನ್ನು ನೋಡಿ ಆನೆ ಹಾಗೂ ಮನುಷ್ಯರ ನಡುವಿನ ಬಾಂಧವ್ಯವನ್ನು ಅರಿತಿದ್ರಿ. ಈಗ ಇದೇ ಮಾದರಿಯ ಹಾಗೂ ಮದುಮಲೈನ ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಕಥೆಗಿಂತಲು ಬಲು ರೋಚಕ ಎನಿಸುವ ಕಥೆ ನಮ್ಮ ಮುಂದಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಶಿಬಿರದಲ್ಲಿ(Rampura Elephant Camp) ದಿ ಎಲೆಫೆಂಟ್ ವಿಸ್ಪರರ್ಸ್ ಸಿನಿಮಾವನ್ನು ಹೋಲುವ ಘಟನೆ ನಡೆದಿದೆ. ಅನಾಥ ಹೆಣ್ಣು ಮರಿ ಆನೆಗೆ ಪೋಷಣೆ ಮಾಡಿ ದಂಪತಿ ಗಮನ ಸೆಳೆದಿದ್ದಾರೆ.
ಮೂಕ ಪ್ರಾಣಿ ಹಾಗೂ ಮಾನವನ ಬಾಂಧವ್ಯಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಬಿಡಾರ ಸಾಕ್ಷಿಯಾಗಿದೆ. ಹೆತ್ತ ತಾಯಿಯಿಂದ ಬೇರೆಯಾದ ಮರಿ ಆನೆಗೆ ಕಾವಡಿ ಕುಟುಂಬವೊಂದು ತಂದೆ ತಾಯಿಯಂತೆ ಪೋಷಣೆ ಮಾಡುತ್ತಿದೆ. ಆನೆ ಮರಿ ಹುಟ್ಟಿದ ಏಳೇ ದಿನಕ್ಕೆ ತಾಯಿಯಿಂದ ಬೇರ್ಪಟ್ಟಿದ್ದು ಏಳು ದಿನದ ಮಗುವಿನಿಂದಲೇ ಈ ದಂಪತಿ ಆನೆ ಮರಿಯನ್ನು ಸಾಕುತ್ತಿದ್ದಾರೆ. ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆಗೆ ಕಾವಾಡಿ ರಾಜು ಪೋಷಕರಾಗಿದ್ದಾರೆ. ಹೆತ್ತ ಮಗುವಂತೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅನಾಥ ಹೆಣ್ಣು ಆನೆಗೆ ಈ ದಂಪತಿ ಆಸರೆಯಾಗಿದ್ದಾರೆ.
ಇದನ್ನೂ ಓದಿ: IPL 2023: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್ ಮತ್ತು ಬೆಳ್ಳಿಗೆ ಜೆರ್ಸಿಯನ್ನು ಗಿಫ್ಟ್ ನೀಡಿದ ಧೋನಿ
ಕಾವಾಡಿ ರಾಜು ಮತ್ತು ರಮ್ಯಾ ಎಂಬ ದಂಪತಿ 7 ತಿಂಗಳ ಹೆಣ್ಣು ಆನೆ ವೇದಾಳನ್ನ ಸ್ವಂತ ಮಗುತರ ಸಾಕಿ ಸಲಹುತ್ತಿದ್ದಾರೆ. ಅನಾಥ ಆನೆ ವೇದ ಅರೆಕ್ಷಣವು ರಾಜು ಹಾಗೂ ಆತನ ಪತ್ನಿಯನ್ನ ಬಿಟ್ಟಿರದು. ಎಲ್ಲಿ ಹೋದರೂ ಜೊತೆಗೇ ಹೋಗುತ್ತೆ. ಸದಾ ಸೀರೆಗೆ ಗಂಟಾಕಿಕೊಂಡಂತೆ ಅವರೊಂದಿಗೆಯೇ ಬದುಕುತ್ತಿದೆ. ವೇದ ಹುಟ್ಟಿದ 7 ದಿನಕ್ಕೆ ತಾಯಿಯಿಂದ ದೂರವಾಗಿದೆ. ಆಗಿನಿಂದಲು ಮರಿ ಹೆಣ್ಣಾನೆ ಪಾಲಿಗೆ ಕಾವಾಡಿ ದಂಪತಿಯೇ ತಂದೆ ತಾಯಿ. ವೇದಾಳನ್ನ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡ್ತಿದ್ದಾರೆ. ಕಾವಾಡಿ ರಾಜುರನ್ನ ನೋಡದೆ ಹೋದ್ರೆ ಚಿಕ್ಕ ಮಕ್ಕಳಂತೆ ವೇದ ಗಲಾಟೆ ಮಾಡ್ತಾಳೆ. ಪ್ರತಿ ದಿನ 12 ಲೀಟರ್ ಹಾಲು ಕುಡಿಯುವ ವೇದ, ಕಾವಾಡಿ ದಂಪತಿಯ ಮುದ್ದು ಕೂಸಾಗಿದೆ. ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:06 am, Wed, 19 July 23