ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಮಚ್ಚಿನಿಂದ ಹಲ್ಲೆ; ಟಿಬೇಟಿಯನ್ ರೈತನ ಮೇಲೆ ಮಾಲೀಕರ ಆಕ್ರೋಶ

| Updated By: ಆಯೇಷಾ ಬಾನು

Updated on: Feb 29, 2024 | 10:47 AM

ಚಾಮರಾಜನಗರ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಗೋಮಾತೆ, ಕಾಮಧೇನು ಎಂದು ಪೂಜಿಸುವ ಹಸು, ಎಮ್ಮೆಗಳ ಮೇಲೆ ಟಿಬೇಟಿಯನ್ ರೈತ ಮಚ್ಚಿನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾನೆ. ಹಸು, ಎಮ್ಮೆ ಮಾಲೀಕರು ಕಣ್ಣೀರು ಹಾಕಿದ್ದು ಜಾನುವಾರುಗಳಿಗೆ ಗಂಭೀರ ಗಾಯಗಳಾಗಿವೆ.

ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಮಚ್ಚಿನಿಂದ ಹಲ್ಲೆ; ಟಿಬೇಟಿಯನ್ ರೈತನ ಮೇಲೆ ಮಾಲೀಕರ ಆಕ್ರೋಶ
ಹಸು, ಎತ್ತುಗಳ ಮೇಲೆ ಮಚ್ಚಿನಿಂದ ಹಲ್ಲೆ
Follow us on

ಚಾಮರಾಜನಗರ, ಫೆ.29: ಹೊಲಕ್ಕೆ ನುಗ್ಗಿದ ಹಸು, ಎತ್ತುಗಳ ಮೇಲೆ ಮಚ್ಚಿನಿಂದ ದಾಳಿ (Assault) ನಡೆಸಿ ವಿಕೃತಿ ಮೆರೆಯಲಾದ ಅಮಾನವೀಯ ಘಟನೆ ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ. ದನಗಳ ಕಾಲುಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ದನಗಳು ನೋವಿನಿಂದ ನರಳುತ್ತಿವೆ. ಅಲ್ಲದೆ ಹಲ್ಲೆ ನಡೆದ ಜಾಗದಲ್ಲಿ ಮಾಂಸ ಕಿತ್ತು ಬಂದಿದ್ದು ರಕ್ತ ಸುರಿಯುತ್ತಿದೆ.

”ತ್ವಂ ಮಾತಾ ಸರ್ವ ದೇವಾನಾಂ ತ್ವಂ ಚ ಯಜ್ಞಸ್ಯ ಕಾರಣಂ|
ತ್ವಂ ತೀರ್ಥ ಸರ್ವತೀರ್ಥಾನಾಂ ನಮಸ್ತೇಸ್ತು ಸದಾನಧೇ||” ಎಂದು ಗೋವನ್ನು ಪೂಜ್ಯ ಭಾವದಿಂದ ನೋಡಲಾಗುತ್ತೆ. ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆಂದು ಹಸುವನ್ನು ಕಾಮಧೇನು ಎಂದು ಪೂಜಿಸಲಾಗುತ್ತೆ. ಆದರೆ ಟಿಬೇಟಿಯನ್ ಕಾಲೋನಿಯಲ್ಲಿ ಕೆಲ ದುಷ್ಕರ್ಮಿಗಳು ಹಸು, ದನಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಹೊಲಕ್ಕೆ ನುಗ್ಗಿದವೆಂದು ಎಂಟಕ್ಕೂ ಹೆಚ್ಚು ಎತ್ತು ಹಾಗೂ ಹಸುಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಗುಂಡಿಮಾಳ ರೈತರ ದನಕರುಗಳು ಟಿಬೇಟಿಯನ್ ರೈತನ ಜೋಳದ ಹೊಲಕ್ಕೆ ಮೇಯಲು ಹೋಗಿದ್ದವು. ಈ ವೇಳೆ ಟಿಬೇಟಿಯನ್ ರೈತ ಕಿಟುಪ್ ದನಕರುಗಳ ಮೇಲೆ ಎರ್ರಾಬಿರ್ರಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಕೊಂಬು, ಬಾಲ, ಕಾಲು ಹೀಗೆ ದನಕರಗಳ ಅಂಗಾಂಗಗಳಿಗೆ ಮಚ್ಚಿನೇಟು ಬಿದ್ದಿದೆ. ಗಾಯಗೊಂಡ ದನಕರುಗಳ ಮೂಕರೋಧನೆ ಕಲ್ಲು ಹೃದಯವಿರುವ ಮನುಷ್ಯರ ಕಣ್ಣಲ್ಲೂ ನೀರು ತರಿಸುವಂತಿದೆ. ಹಸು, ಎತ್ತುಗಳು ನಡೆಯಲಾರದೆ ಹೊಲದಲ್ಲೇ ಕುಸಿದು ಬೀಳುತ್ತಿವೆ. ಜೀವನೋಪಾಯಕ್ಕಾಗಿ ದನಕರುಗಳನ್ನೇ ಅವಲಂಬಿಸಿರುವ ಗುಂಡಿಮಾಳ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಆಸ್ತಿ ಕಾವಲಿಗೆ ತಂತ್ರಜ್ಞಾನ‌ದ ಮೂಲಕ‌ ಕಡಿವಾಣ; ಲ್ಯಾಂಡ್ ಬೀಟ್ ಆ್ಯಪ್ ಸಿದ್ಧಗೊಳಿಸಿದ ಸರ್ಕಾರ

ವಿದ್ಯುತ್ ತಂತಿ ತಗುಲಿ ಎಮ್ಮೆಗಳ ಸಾವು

ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ನಾಲ್ಕು ಎಮ್ಮೆಗಳು ಹಾಗೂ ಒಂದು ಕೋಣ ಮೃತಪಟ್ಟಿದೆ. ಮಲ್ಹಾರ ಗ್ರಾಮದ ಸಾಬಣ್ಣ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದ್ದು ಎರಡು ಲಕ್ಷ ಮೌಲ್ಯದ ಎಮ್ಮೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಗ್ರಾಮದ ಆಂಜನೇಯ, ಹನುಮಂತ, ಭೀಮ್ಮಪ್ಪ ಹಾಗೂ ದೊಡ್ಡಪ್ಪ ಎಂಬ ರೈತರಿಗೆ ಸೇರಿದ ಎಮ್ಮೆಗಳು ಮೃತಪಟ್ಟಿವೆ. ವಿದ್ಯುತ್ ತಂತಿ ಜೋತು ಬಿದ್ದ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದ್ರು ನಿರ್ಲಕ್ಷ್ಯ ತೋರಿದ್ದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ