ಚಾಮರಾಜನಗರ, ಡಿಸೆಂಬರ್ 28: ಕಾಡು ಸುತ್ತುವುದು ಯಾರಿಗಿಷ್ಟ ಇಲ್ಲ ಹೇಳಿ. ವನ್ಯ ಪ್ರಿಯರಿಗೆ ಮತ್ತು ವನ್ಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರಿಗೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಸಿಹಿ ಸುದ್ದಿ ನೀಡಿದ್ದಾರೆ. ಚಾಮರಾಜನಗರ (Chamrajnagar) ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಪ್ರಸಿದ್ಧ ಸಫಾರಿ (Safari) ಕೇಂದ್ರಗಳಿವೆ. ಇದಕ್ಕೆ ಮತ್ತೇರಡು ಹೊಸ ಸಫಾರಿ ಕೇಂದ್ರಗಳು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ರಾಜ್ಯದಲ್ಲಿ ಪ್ರಸಿದ್ಧ ವನ್ಯ ತಾಣವಾಗಿದೆ. ಈಗಾಗಲೇ ಈ ಅರಣ್ಯದ ಕೆ.ಗುಡಿ ವಲಯದಲ್ಲಿ ಒಂದು ಸಫಾರಿ ಕೇಂದ್ರ ತೆರೆಯಲಾಗಿದೆ. ನೂರಾರು ಪ್ರವಾಸಿಗರು ಭೇಟಿ ನೀಡಿ ಸಫಾರಿಯಲ್ಲಿ ಪಕ್ಷಿಗಳನ್ನು ಕಣ್ತುಂಬಿಕೊಂಡು ಸಂತಸ ಪಟ್ಟು ಹೋಗುತ್ತಿದ್ದಾರೆ. ಅಲ್ಲದೇ ಈಗಿರುವ ಸಫಾರಿ ಪ್ರದೇಶದಲ್ಲಿ ಹೆಚ್ಚು ಜನರು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಲೂ ಸಾಧ್ಯವಿಲ್ಲ. ಅದಕ್ಕೆ ಹೊಸದಾಗಿ ಸಫಾರಿ ಕೇಂದ್ರ ಆರಂಭಿಸುವಂತೆ ಡಿಮ್ಯಾಂಡ್ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಪ್ರದೇಶದಲ್ಲಿ ಹೊಸದಾಗಿ ಸಫಾರಿ ಕೇಂದ್ರ ಸ್ಥಾಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ಸಿದ್ದಪಡಿಸಿದ್ದಾರೆ.
ಇದನ್ನೂ ಓದಿ: ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಹಾಗೂ ಚಾಮರಾಜನಗರ ತಾಲೂಕಿನ ಬೂದಿಪಡಗ ಎಂಬಲ್ಲಿ ಎರಡು ಕಡೆ ಹೊಸದಾಗಿ ಸಫಾರಿ ಕೇಂದ್ರ ತೆರೆಯುವುದರ ಜೊತೆಗೆ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಇಕೋ ಟೂರಿಸಂಗೆ ಉತ್ತೇಜನ ಕೊಡುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ಪ್ರವಾಸಿಗರಿಗೂ ಕೂಡ ವನ್ಯ ಪ್ರಾಣಿಗಳ ದರ್ಶನದ ಜೊತೆಗೆ ಜನರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತೆ ಎಂದು ಅರಣ್ಯ ಅಧಿಕಾರಿಗಳು ತಿಳಿದ್ದಾರೆ.
ಒಟ್ಟಾರೆ ಈಗಾಗಲೇ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿಯಲ್ಲಿ ಸಫಾರಿ ಕೇಂದ್ರವಿದ್ದು ಪ್ರವಾಸಿಗರು ವಾರಾಂತ್ಯದ ವೇಳೆ ಲಗ್ಗೆ ಇಡುತ್ತಿದ್ದಾರೆ. ಇದೀಗ ಮತ್ತೇರಡು ಹೊಸ ಸಫಾರಿ ಕೇಂದ್ರ ತೆರೆಯಲು ಮುಂದಾಗಿರುವುದರಿಂದ ಪ್ರವಾಸಿಗರು ವನ್ಯ ಪ್ರಾಣಿ, ಪಕ್ಷಿ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ