ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೇವಲ 67 ರೂ.ನಂತೆ ಐವರಿಗೆ ಮಂಡಿ ಶಸ್ತ್ರಚಿಕಿತ್ಸೆ

| Updated By: ಆಯೇಷಾ ಬಾನು

Updated on: Sep 25, 2023 | 9:55 AM

Ayushman Bharat Arogya Karnataka: ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಐವರು ಮಂಡಿಮೂಳೆ ಅಸ್ಥಿರಜ್ಜು ಮರುನಿರ್ಮಾಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಜಸ್ಟ್‌ 67 ರೂಪಾಯಿನಲ್ಲೇ ಚಿಕಿತ್ಸೆ ಮುಗಿದಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು ಐದು ವರ್ಷಗಳಾಗಿವೆ. ಬಿಪಿಎಲ್‌ ಕಾರ್ಡ್‌ದಾರರು, ಜಿಲ್ಲಾಸ್ಪತ್ರೆಗಳಲ್ಲಿ ಈ ಕಾರ್ಡ್‌ ತೋರಿಸಿ ಎಂಥಾ ದೊಡ್ಡ ಆಪರೇಷನ್‌ ಕೂಡಾ ಮಾಡಿಸಿಕೊಳ್ಳಬಹುದು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೇವಲ 67 ರೂ.ನಂತೆ ಐವರಿಗೆ ಮಂಡಿ ಶಸ್ತ್ರಚಿಕಿತ್ಸೆ
ಮಂಡಿ ಶಸ್ತ್ರ ಚಿಕಿತ್ಸೆ
Follow us on

ಚಾಮರಾಜನಗರ, ಸೆ.25: ಜ್ವರ, ಕೆಮ್ಮು ಅಂತಾ ಆಸ್ಪತ್ರೆಗೆ ಹೋದ್ರೆ ಸಾವಿರ ರೂಪಾಯಿ ಬಿಲ್ ಆಗುತ್ತೆ. ಇನ್ನು ಆಪರೇಷನ್ ಅಂತಾ ಹೋದ್ರೆ ಲಕ್ಷ ಲೆಕ್ಕದಲ್ಲೇ ದುಡ್ಡು ಬೇಕು. ಆದ್ರೆ ಅದೊಂದು ಆಸ್ಪತ್ರೆಯಲ್ಲಿ ಜಸ್ಟ್‌ 67 ರೂಪಾಯಿಗೆ ಮಂಡಿ ನೋವಿನ ಶಸ್ತ್ರ ಚಿಕಿತ್ಸೆ ಆಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ (Ayushman Bharat Arogya Karnataka) ಕೇವಲ 67 ರೂಪಾಯಿ ವೆಚ್ಚದಲ್ಲಿ ಮಂಡಿ ಆಪರೇಷನ್ (Knee Surgery) ಮಾಡಿಸಿಕೊಂಡಿದ್ದಾರೆ. ಒಂದೂವರೆ ಲಕ್ಷ ವೆಚ್ಚದ ಮಂಡಿ ಆಪರೇಷನ್ ಕೇವಲ 67 ರೂ ವೆಚ್ಚದಲ್ಲಿ ಮುಗಿದಿದೆ. ಅದು ಹೇಗೆ ವಿವರ ಇಲ್ಲಿದೆ.

ಸಾಮಾನ್ಯವಾಗಿ ಮಂಡಿಮೂಳೆ ಅಸ್ಥಿರಜ್ಜು ಮರುನಿರ್ಮಾಣ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇವಲ 67 ರೂಪಾಯಿಗೆ ಮಂಡಿ ಆಪರೇಷನ್ ಮಾಡುವ ಮೂಲಕ ಚಾಮರಾಜನಗರ ಸಿಮ್ಸ್ (ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ) ವೈದ್ಯರು ಗಮನ ಸೆಳೆದಿದ್ದಾರೆ. ತಲಾ 67 ರೂಪಾಯಿ ವೆಚ್ಚದಲ್ಲಿ 5 ಮಂದಿಗೆ ಏಕಕಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು ಐದು ವರ್ಷಗಳಾಗಿವೆ. ಆದರೆ ಈ ಯೋಜನೆಯಡಿ ಲಭಿಸುವ ಉಚಿತ ಆರೋಗ್ಯ ಸೇವೆಗಳ ಬಗ್ಗೆ ಬಹುತೇಕ ಜನರಿಗೆ ಅರಿವೇ ಇಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಿಮ್ಸ್ ವೈದ್ಯರು ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಿ 5 ಮಂದಿಗೆ ಏಕಕಾಲದಲ್ಲಿ ಮಂಡಿಮೂಳೆ ಅಸ್ಥಿರಜ್ಜು ಮರುನಿರ್ಮಾಣ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಹೊರ ರೋಗಿ ಚೀಟಿಗೆ 10 ರೂಪಾಯಿ, ಪ್ರವೇಶ ಶುಲ್ಕ 25 ಹಾಗು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಜೆರಾಕ್ಸ್‌ಗೆ 2 ರೂಪಾಯಿ. ಹೀಗೆ ಪ್ರತಿ ರೋಗಿಗೆ ಕೇವಲ 67 ರೂಪಾಯಿ ಮಾತ್ರ ವೆಚ್ಚ ತಗುಲುತ್ತೆ. ರೋಗಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ್ದರೆ ಸಂಪೂರ್ಣ ಉಚಿತ ಎಂದು ಸಿಮ್ಸ್‌ನ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಮಾರುತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಚಿತ್ರ ರೋಗಕ್ಕೆ ತುತ್ತಾದ ಮಕ್ಕಳ ಮನೆಗೆ ಆರೋಗ್ಯ ಸಚಿವ ಭೇಟಿ: ಕುಟುಂಬಸ್ಥರಿಗೆ ಧೈರ್ಯ ತುಂಬಿದ ದಿನೇಶ್ ಗುಂಡುರಾವ್

ಮಂಡಿ ಶಸ್ತ್ರ ಚಿಕಿತ್ಸೆ ಮಾಡಿದ್ದಲ್ಲದೆ ಇದರ ನೇರ ಪ್ರಾತ್ಯಕ್ಷಿಕೆ (Live Demonstration) ಮೂಲಕ ಸಿಮ್ಸ್ ವೈದ್ಯರು ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಮೃತದೇಹದ ಮೇಲೆ ತರಬೇತಿ ಅಥವಾ ಶಸ್ತ್ರಚಿಕಿತ್ಸೆಯ ವಿಡಿಯೋ ತೋರಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ ರಾಜ್ಯದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೇ ಮೊದಲ ಬಾರಿಗೆ ಸಿಮ್ಸ್ ಆಸ್ಪತ್ರೆಯಲ್ಲಿ ಮಂಡಿಮೂಳೆ ಅಸ್ಥಿರಜ್ಜು ಮರುನಿರ್ಮಾಣ ಶಸ್ತ್ರ ಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ನೊಂದಣಿ ಮಾಡಿಕೊಂಡ ಬೇರೆಬೇರೆ ಆಸ್ಪತ್ರೆಯ ವೈದ್ಯರಿಗೆ ಖುದ್ದು ಪಾಲ್ಗೊಂಡು ಶಸ್ತ್ರಚಿಕಿತ್ಸೆಯ ತರಬೇತಿಗೆ ಅವಕಾಶ ಕಲ್ಪಿಸಲಾಗಿತ್ತು. ತಲಾ 5 ಮಂದಿಯ ಐದು ತಂಡ ರಚನೆ ಮಾಡಿ ಅವರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದ ನೇರವಾಗಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನೋಡಿ ಕಲಿಯಲು ಅವಕಾಶ ಕಲ್ಪಿಸಲಾಗಿತ್ತು

ಒಟ್ಟಾರೆ ಸಾಮಾನ್ಯ ಜನರಿಗೆ ಆಯುಷ್ಮಾನ್ ಯೋಜನೆಯ ಸೌಲಭ್ಯಗಳ ಹಾಗು ತಜ್ಞ ವೈದ್ಯರ ಜ್ಞಾನದ ಲಾಭ ಬೇರೆ ಬೇರೆ ಆಸ್ಪತ್ರೆಗಳ ವೈದ್ಯರಿಗೆ ಲಭಿಸಬೇಕು ಎಂಬ ದೃಷ್ಟಿಯಿಂದ ಆಯೋಜಿಸಿದ್ದ ಈ ಕಾರ್ಯಾಗಾರ ಯಶಸ್ವಿಯಾಗಿದೆ.

ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:44 am, Mon, 25 September 23