Chamarajpet Bundh: ಬೆಳಗ್ಗೆ 8 ಗಂಟೆಯಿಂದ ಚಾಮರಾಜಪೇಟೆ ಬಂದ್, ಈದ್ಗಾ ಮೈದಾನ ವಿವಾದದ ಹಿನ್ನೆಲೆ ಇ​ಲ್ಲಿದೆ

| Updated By: Rakesh Nayak Manchi

Updated on: Jul 12, 2022 | 6:47 AM

ಈದ್ಗಾ ಮೈದಾನ ವಿವಾದ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಬೆಳಗ್ಗೆ 8 ಗಂಟೆಯಿಂದ ಶಾಂತಿಯುತ ಚಾಮರಾಜಪೇಟೆ ಬಂದ್​ ನಡೆಸಲಿವೆ.

Chamarajpet Bundh: ಬೆಳಗ್ಗೆ 8 ಗಂಟೆಯಿಂದ ಚಾಮರಾಜಪೇಟೆ ಬಂದ್, ಈದ್ಗಾ ಮೈದಾನ ವಿವಾದದ ಹಿನ್ನೆಲೆ ಇ​ಲ್ಲಿದೆ
ಚಾಮರಾಜಪೇಟೆಯ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಈದ್ಗಾ ಮೈದಾನ ವಿವಾದ ಸಂಬಂಧ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಬೆಳಗ್ಗೆ 8 ಗಂಟೆಯಿಂದ ಶಾಂತಿಯುತ ಚಾಮರಾಜಪೇಟೆ ಬಂದ್​ ನಡೆಸಲಿವೆ. ಸ್ವಯಂಪ್ರೇರಿತ ಬಂದ್​ಗೆ ಕರೆ ಕೊಟ್ಟಿರುವ ನಾಗರಿಕರ ಒಕ್ಕೂಟಕ್ಕೆ ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಸನಾತನ ಪರಿಷತ್, ಬಜರಂಗದಳ, ಹಿಂದೂ ಜಾಗರಣ ಸಮಿತಿ, ಶ್ರೀರಾಮ ಸೇನೆ, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಆ ಮೂಲಕ ಈದ್ಗಾ ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಚಾಮರಾಜಪೇಟೆ ಬಂದ್ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆವರೆಗೆ ಇರಲಿದೆ.

ಇದನ್ನೂ ಓದಿ: Chamarajpet Bandh : ಜುಲೈ 12ಕ್ಕೆ ಚಾಮರಾಜಪೇಟೆ ಬಂದ್: ಪೊಲೀಸರಿಂದ ಬಿಗಿ ಬಂದೋಬಸ್ತ್

ಒಂದು ದಿನದ ಮಟ್ಟಿಗೆ ಮಾತ್ರ ಶಾಂತಿಯುತ ಬಂದ್​​ಗೆ ಕರೆ ಕೊಟ್ಟಿರುವ ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಈದ್ಗಾ ಮೈದಾನ ಬದಲಿಸಿ ಆಟದ ಮೈದಾನ ಉಳಿಸಿ ಎಂಬ ಘೋಷಣೆಗಳನ್ನು ಕೂಗಲಿದ್ದಾರೆ. ಬಂದ್ ಬಳಿಕ ಸರ್ಕಾರದ ನಡೆ ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿರುವ ಒಕ್ಕೂಟವು ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲು ಯೋಜನೆಯನ್ನು ಹಾಕಿಕೊಂಡಿದೆ.

ಚಾಮರಾಜಪೇಟೆ ಮೈದಾನ ವಿವಾದದ ಹಿನ್ನೆಲೆ ಏನು?

ಆಟದ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆಯಲಾಗುತ್ತದೆ. 1952ರಿಂದಲೇ ಈ ಮೈದಾನದ ಬಗ್ಗೆ ವಿವಾದ ಪ್ರಾರಂಭವಾಗಿತ್ತು. ಈ ಮೈದಾನದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘಟನೆಯ ಅಧ್ಯಕ್ಷ ಎಸ್. ಭಾಸ್ಕರನ್ ಹೇಳಿದ್ದರು. ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ, ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ ಶಾಸಕ ಜಮೀರ್ ಅಹಮದ್ ಖಾನ್ ಪೊಲೀಸರ ಮೂಲಕ ಅಡ್ಡಿ ಪಡಿಸುತ್ತಿದ್ದಾರೆಂದು ಹಿಂದೂಪರ ಸಂಘಟನೆಗಳ ಆರೋಪವಾಗಿದೆ.

ಇದನ್ನೂ ಓದಿ: Chamarajpet Bandh: ಚಾಮರಾಜಪೇಟೆ ಬಂದ್​ಗೆ ಹಿಂದುತ್ವವಾದಿ ಸಂಘಟನೆಗಳ ಬೆಂಬಲ; ಬಿಗಿ ಪೊಲೀಸ್ ಬಂದೋಬಸ್ತ್​

ಚಾಮರಾಜಪೇಟೆ ಮೈದಾನ ಬಿಬಿಎಂಪಿಗೆ ಸೇರಿದ ಆಸ್ತಿಯಾಗಿದೆ ಎಂದು ಹೇಳಿದ್ದ ಬಿಬಿಎಂಪಿ, ಆಟದ ಮೈದಾನ, ಪಿಐಡಿ ನಂ. 46-8-2 ಬಿಬಿಎಂಪಿ ಸ್ವತ್ತುಗಳಾಗಿವೆ, ಇದರ ಜೊತೆಗೆ ಈದ್ಗಾ ಗೋಡೆ ಬಿಬಿಎಂಪಿ ಸ್ವತ್ತು ಎಂದು ದಾಖಲೆಯಲ್ಲಿದೆ. 2 ಎಕರೆಯಲ್ಲಿ ಈ ಮೈದಾನದವಿದ್ದು, 941 ಚದರ ಅಡಿ ಈದ್ಗಾ ಗೋಡೆ ಇದೆ, 941 ಅಡಿ ಈದ್ಗಾ ಗೋಡೆ ಬಿಟ್ಟು, ಉಳಿದದ್ದು ಬಿಬಿಎಂಪಿ ಸ್ವತ್ತಾಗಿದೆ ಎಂದು ಆರಂಭದಲ್ಲಿ ಹೇಳಿತ್ತು. ನಂತರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಹಕ್ಕು ಮತ್ತು 1965 ರ ಗೆಜೆಟ್ ಅಧಿಸೂಚನೆ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿದೆ ಎಂದು ಬಿಬಿಎಂಪಿ ಹೇಳಿತ್ತು.

ಇನ್ನು ಬಿಬಿಎಂಪಿ ಆಯುಕ್ತರ ಹೇಳಿಕೆ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿತ್ತು. ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ರವರು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದರು. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಮೈದಾನ ಬಿಬಿಎಂಪಿ ಸ್ವತ್ತು ಎಂದಿದ್ದರು. ಇವರಿಬ್ಬರ ದ್ವಂದ್ವ ಹೇಳಿಕೆಗಳು ಜನರಲ್ಲಿ ಗೊಂದಲ ಉಂಟು ಮಾಡಿತ್ತು. ಒಮ್ಮೆ ಈ ಮೈದಾನವನ್ನು ವಕ್ಫ್‌ ಆಸ್ತಿ ಎಂದು ಹೇಳಿದರೆ, ಮತ್ತೊಮ್ಮೆ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಲಾಗುತ್ತದೆ. ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದರಲ್ಲಿ ಬಿಬಿಎಂಪಿ ಆಯುಕ್ತರು ಸಂಪೂರ್ಣ ವಿಫಲವಾದ ಹಿನ್ನೆಲೆ ಸ್ಥಳೀಯರೇ ಬಂದ್ ಮಾಡಿ ಸರ್ಕಾರಕ್ಕೆ ಒತ್ತಡ ಹೇರಲು ಸಜ್ಜಾಗಿದೆ.

ಇದನ್ನೂ ಓದಿ: ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸರ್ಕಾರಕ್ಕೆ ಹೈಕೋರ್ಟ್​​ ಸೂಚನೆ

Published On - 6:47 am, Tue, 12 July 22