Chamarajpet Bandh: ಚಾಮರಾಜಪೇಟೆ ಬಂದ್ಗೆ ಹಿಂದುತ್ವವಾದಿ ಸಂಘಟನೆಗಳ ಬೆಂಬಲ; ಬಿಗಿ ಪೊಲೀಸ್ ಬಂದೋಬಸ್ತ್
50ಕ್ಕೂ ಹೆಚ್ಚು ಸಂಘಟನೆಗಳು ನೀಡಿರುವ ಬಂದ್ ಕರೆ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್ ಕರೆ ಕುರಿತು ಜಾಗೃತಿ ಮೂಡಿಸಲು 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಹಂಚಲಾಗುತ್ತಿದೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ನೀಡಿರುವ ಬಂದ್ ಕರೆಗೆ ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಸನಾತನ ಪರಿಷತ್, ಶ್ರೀರಾಮಸೇನೆ, ಬಜರಂಗದಳ, ಹಿಂದೂ ಜಾಗರಣ ಸಮಿತಿ ಸೇರಿದಂತೆ ಹಲವು ಹಿಂದುತ್ವವಾದಿ ಸಂಘಟನೆಗಳು ಬೆಂಬಲ ಘೋಷಿಸಿವೆ. 50ಕ್ಕೂ ಹೆಚ್ಚು ಸಂಘಟನೆಗಳು ನೀಡಿರುವ ಬಂದ್ ಕರೆ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್ ಕರೆ ಕುರಿತು ಜಾಗೃತಿ ಮೂಡಿಸಲು ನಾಗರಿಕ ಒಕ್ಕೂಟದ ಕಾರ್ಯಕರ್ತರು 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಹಂಚಲು ಮುಂದಾಗಿದ್ದಾರೆ. ಅಂಗಡಿ, ಬ್ಯಾಂಕ್, ಶಾಲಾ-ಕಾಲೇಜು, ಮಾಲ್ಗಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಹಿಂದುತ್ವವಾದಿ ಸಂಘಟನೆಗಳ ಮುಖಂಡರಾದ ಮೋಹನ್ ಗೌಡ, ಭಾಸ್ಕರನ್ ಕರಪತ್ರ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಾಮರಾಜಪೇಟೆ ಬಂದ್ಗೆ ಬೆಂಬಲ ನೀಡುವಂತೆ ಮೈಕ್ ಅಳವಡಿಸಿರುವ ಆಟೊಗಳ ಮೂಲಕವೂ ಮನವಿ ಮಾಡಲಾಗುತ್ತಿದೆ. ನಾಳೆ ಒಂದು ದಿನದ ಮಟ್ಟಿಗೆ ಅಂಗಡಿ ಮುಂಗಟ್ಟು ತೆರೆಯಬೇಡಿ. ಮೈದಾನದ ಉಳಿವಿಗಾಗಿ ಕೈಜೋಡಿಸಿ ಎಂದು ಮುಖಂಡರು ಚಾಮರಾಜಪೇಟೆ ಕ್ಷೇತ್ರದ ಎಲ್ಲ 7 ವಾರ್ಡ್ಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಛಲವಾದಿಪಾಳ್ಯ, ಕೆ.ಆರ್.ಮಾರ್ಕೆಟ್, ಆಜಾದ್ನಗರ ವಾರ್ಡ್, ಚಾಮರಾಜಪೇಟೆ, ಪಾದರಾಯನಪುರ, ರಾಯಪುರ ವಾರ್ಡ್, ಜೆಜೆಆರ್ ನಗರ ವಾರ್ಡ್ಗಳಲ್ಲಿ ಮೈಕ್ ಕಟ್ಟಿರುವ ಆಟೊಗಳು ಸಂಚರಿಸುತ್ತಿವೆ.
ಬಿಗಿ ಬಂದೋಬಸ್ತ್: ಆರಗ ಜ್ಞಾನೇಂದ್ರ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ. ಬಂದ್ ಸಂದರ್ಭದಲ್ಲಿ ಚಾಮರಾಜಪೇಟೆ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು’ ಎಂದು ಹೇಳಿದರು.
ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಸಚಿವರು ಹೋಗುತ್ತಾರೆ. ಆಗುಂಬೆ ಬಳಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಸ್ಥಗಿತವಾಗಿದೆ. ಕೂಡಲೇ ದುರಸ್ತಿ ಮಾಡುವಂತೆ ಸೂಚನೆ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಮುಂಜಾಗ್ರತಾ ಕ್ರಮಕೈಗೊಂಡು ಮಳೆ ಹಾನಿಗೆ ತಕ್ಷಣ ಪರಿಹಾರ ಕೂಡ ಕೊಡುತ್ತಿದೆ ಎಂದು ತಿಳಿಸಿದರು. ಇಷ್ಟುದಿನ ಜಿಲ್ಲಾಧಿಕಾರಿಗಳ ಬಳಿ ಹಣ ಇರಿಸಲಾಗುತ್ತಿತ್ತು. ಈಗ ತಹಶಿಲ್ದಾರರ ಖಾತೆಗೆ ಹಣ ನೀಡಲಾಗುತ್ತಿದೆ. ಮನೆ ಪರಿಹಾರಕ್ಕಾಗಿ ತಕ್ಷಣಕ್ಕೆ ₹ 10 ಸಾವಿರ ಕೊಡಲಾಗುತ್ತಿದೆ ಎಂದು ತಿಳಿಸಿದರು.