ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಕಬ್ಬು ಬೆಳೆಗಾರರ ಯತ್ನ: ಬಂಧನ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ರಾಜ್ಯದ ರೈತ ಸಂಘ ನಿರ್ಧರಿಸಿತ್ತು.
ಬೆಂಗಳೂರು: ಕಬ್ಬು ಬೆಳೆಗಾರರಿಗೆ (Sugarcane growers) ತೂಕದಲ್ಲಿ ವಂಚನೆ, ಪಾವತಿಯಲ್ಲಿ ವಿಳಂಬ ಮತ್ತು 4 ವರ್ಷದಿಂದ ಎಸ್ಎಪಿಯನ್ನು ಕಬ್ಬು ಬೆಳೆಗಾರರಿಗೆ ಕೊಟ್ಟಿಲ್ಲವೆಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ರಾಜ್ಯದ ರೈತ ಸಂಘ ನಿರ್ಧರಿಸಿತ್ತು. ಒಂದು ಟನ್ ಕಬ್ಬಿಗೆ 4500 ರೂ ನಿಗದಿ ಮಾಡಬೇಕು. ಕಬ್ಬಿನ ಹಳೆ ಬಾಕಿ ಪಾವತಿಸಬೇಕು. ಗೃಹ ವಿದ್ಯುತ್ ಬಾಕಿ ವಸೂಲಿ ನಿಲ್ಲಿಸಿ ಹಿಂದಿನ ಸರ್ಕಾರ ಮಾತಿನಂತೆ ನಡೆದುಕೊಳ್ಳಿ. ಈ ಎಲ್ಲಾ ವಿಚಾರ ಗೊತ್ತಿದ್ರು ಸರ್ಕಾರ ಇದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎಸ್ಎಪಿಯನ್ನು ಸರ್ಕಾರ ನಾಲ್ಕು ವರ್ಷದಿಂದ ಕಬ್ಬು ಬೆಳೆಗಾರರಿಗೆ ಕೊಟ್ಟಿಲ್ಲ. ಕಾರಣ ಕಬ್ಬು ಕಾರ್ಖಾನೆಯ ಮಾಲೀಕರೇ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಇದನ್ನು ಓದಿ: ಸಾಲ ಮರುಪಾವತಿ ಮಾಡದೆ ಪಲಾಯನಗೈದಿರುವ ಆರ್ಥಿಕ ಅಪರಾಧಿ ವಿಜಯ ಮಲ್ಯ ವಿರುದ್ಧ ಭಾರತದಲ್ಲಿ ಹಲವಾರು ಪ್ರಕರಣಗಳು!
ಪ್ರೊ. ಎಂ.ಡಿ ನಂಜುಡಸ್ವಾಮಿ ಇದ್ದಾಗ ವಿದ್ಯುತ್ ತಾರತಮ್ಯದ ವಿರುದ್ಧ ಕರ ನಿರಾಕರಣೆ ಚಳುವಳಿಗೆ ಕರೆ ನೀಡಿದ್ರು. ಇದರಿಂದ ರಾಜ್ಯದ ಸಾವಿರಾರು ರೈತರು ವಿದ್ಯುತ್ ಬಿಲ್ನ್ನು ಪಾವತಿ ಮಾಡಿರಲಿಲ್ಲ. 2017 ರಲ್ಲಿ ರಾಜ್ಯ ಸರ್ಕಾರ ಹಳೆ ಬಿಲ್ನ್ನು ಮನ್ನಾ ಮಾಡುತ್ತೇವೆ. ಹೊಸ ಮೀಟರ್ ಹಾಕುತ್ತೇವೆ. ಹೊಸ ದರ ಪಾವತಿ ಮಾಡಿಕೊಂಡು ಹೋಗುವಂತೆ ಸೂಚನೆ ನೀಡಿದ್ರು. ಈಗ ಸರ್ಕಾರ ಹಳೆಯ ಬಿಲ್ನ್ನು ವಸೂಲಿ ಮಾಡಲು ಮುಂದಾಗಿದೆ. ಈ ಕರಾ ನಿರಾಕರಣೆ ಚಳುವಳಿಯಲ್ಲಿ ಹಳೆಯ ಬಿಲ್ ಪಾವತಿ ಮಾಡಿಸಿಕೊಳ್ಳದಂತೆ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿ ಎಂದು ಮನವಿ ಮಾಡಿದ್ದು, ಹೀಗಾಗಿ ಇಂದು ಸಿಎಂ ಮನೆ ಮುತ್ತಿಗೆ ಹಾಕಲು ರಾಜ್ಯದ ರೈತ ಸಂಘ ತೀರ್ಮಾನಿಸಿತ್ತು.
ಇದನ್ನೂ ಓದಿ; ಕರ್ನಾಟಕದಲ್ಲಿ ಮಳೆ ಅಬ್ಬರ: ನಾಳೆಯಿಂದ ಎರಡು ದಿನ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ:
ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಲು ವಿದ್ಯುತ್ ಬಾಕಿ ಬಲಾತ್ಕಾರ ವಸೂಲಿ ವಿರುದ್ಧ ರೈತರು ಪ್ರತಿಭಟಿಸಿದ್ದು, ರಾತ್ರಿಯಿಂದಲೇ ರೈತರು ಬಂದು ಜಮಾಯಿಸುತ್ತಿದ್ರು, ಇನ್ನೂ ಜನ ಬರ್ತಿದ್ರು. ಆದರೆ ಪೊಲೀಸರು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬಿಗಡಾಯಿಸುವಂತೆ ಮಾಡುತ್ತಿದ್ದಾರೆ. ಎಲ್ಲರನ್ನೂ ವಶಕ್ಕೆ ಪಡೆಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸಿಎಂ ಬಗೆಹರಿಸಬೇಕೆಂದು ನಾವು ಒತ್ತಾಯಿಸಿದ್ದೇವೆ. ಆದರೆ ಪೊಲೀಸರು ನಮ್ಮನ್ನು ಅರೆಸ್ಟ್ ಮಾಡಿ ಸಮಸ್ಯೆ ಬಗೆಹರಿಸಬಹುದು. ಆದರೆ ನಾಳೆ ಮಂಡ್ಯಗೆ ಸಿಎಂ ಬರಲೇ ಬೇಕು. ಕಾವೇರಿ ತುಂಬಿದೆ ಬಂದೇ ಬರ್ತಾರೆ. ಅಲ್ಲಿಗೆ ಸಾವಿರಾರು ರೈತರು ಸೇರಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ, ಅಲ್ಲಿ ನಮ್ಮನ್ನು ಬಂಧಿಸಲಿ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ಸಿಎಂ ಮನೆಗೆ ಮುತ್ತಿಗೆ ಹಾಕಲು ಆಗಮಿಸಿದ್ದ ರೈತರು ವಶಕ್ಕೆ:
ಸಿಎಂ ಮನೆಗೆ ಮುತ್ತಿಗೆ ಹಾಕಲು ಆಗಮಿಸಿದ್ದ ರೈತರನ್ನು KSR ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ನಮ್ಮನ್ನ ವಶಕ್ಕೆ ಪಡೆದರೂ ಮುತ್ತಿಗೆ ಹಾಕುತ್ತೇವೆ. ಒಂದೊಮ್ಮೆ ನಮಗೆ ಪೊಲೀಸರು ಅವಕಾಶ ನೀಡದಿದ್ದರೆ, KRSಗೆ ಬಾಗಿನ ಅರ್ಪಿಸಲು ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ರೈಲ್ವೆ ನಿಲ್ದಾಣದಲ್ಲಿ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಕಿಡಿ ಕಾರಿದರು.
Published On - 1:35 pm, Mon, 11 July 22