AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chamarajpet Bandh : ಜುಲೈ 12ಕ್ಕೆ ಚಾಮರಾಜಪೇಟೆ ಬಂದ್: ಪೊಲೀಸರಿಂದ ಬಿಗಿ ಬಂದೋಬಸ್ತ್

ನಾಳೆ (ಜುಲೈ 12) ಚಾಮರಾಜಪೇಟೆ ಬಂದ್ ಹಿನ್ನೆಲೆ ಚಾಮರಾಜಪೇಟೆಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Chamarajpet Bandh : ಜುಲೈ 12ಕ್ಕೆ ಚಾಮರಾಜಪೇಟೆ ಬಂದ್: ಪೊಲೀಸರಿಂದ ಬಿಗಿ ಬಂದೋಬಸ್ತ್
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 11, 2022 | 11:03 PM

ಬೆಂಗಳೂರು: ನಾಳೆ (ಜುಲೈ 12) ಚಾಮರಾಜಪೇಟೆ (Chamrajpet) ಬಂದ್ (Bandh) ಹಿನ್ನೆಲೆ ಚಾಮರಾಜಪೇಟೆಯಲ್ಲಿ ಬಿಗಿ ಪೊಲೀಸ್ (Police)​  ಬಂದೋಬಸ್ತ್ ಕೈಗೊಳ್ಳಲಾಗಿದೆ. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಿದ್ದು, 2 ಡಿಸಿಪಿ, 10 ಎಸಿಪಿ, 20 ಇನ್ಸ್ಪೆಕ್ಟರ್, 120 ಪಿಎಸ್ಐ, 500ಕ್ಕೂ ಹೆಚ್ಚು ಜನ ಪೊಲೀಸ್ ಕಾನ್ಸ್‌ಟೇಬಲ್​​ಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರ್ಗಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

ಬಂದ್ ಗೆ ಪೊಲೀಸ್ ಠಾಣೆಯಿಂದ ಯಾವುದೇ ಅನುಮತಿ ನೀಡಿಲ್ಲ. ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸ್ವಯಂ ಪ್ರೇರಿತವಾಗಿ ಬಂದ್​ಗೆ ಕರೆ ನೀಡಿದೆ. ನಾಳೆ ಬಲವಂತದಿಂದ ಯಾರೂ ಅಂಗಡಿ – ಮುಂಗಟ್ಟು ಮುಚ್ಚಿಸುವಂತಿಲ್ಲ. ಒಂದ್ ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸಿದರೆ ಕೇಸ್ ದಾಖಲಾಗುವುದು. ಸರ್ಕಾರದಿಂದ ಅಥವಾ ಪೊಲೀಸ್ ಇಲಾಖೆಯಿಂದ ಬಂದ್​ಗೆ ಅನುಮತಿ ನೀಡಿಲ್ಲ ಎಂದು ಟಿವಿ9 ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ನೀಡಿರುವ ಬಂದ್ ಕರೆ​ಗೆ ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಸನಾತನ ಪರಿಷತ್, ಶ್ರೀರಾಮಸೇನೆ, ಬಜರಂಗದಳ, ಹಿಂದೂ ಜಾಗರಣ ಸಮಿತಿ ಸೇರಿದಂತೆ ಹಲವು ಹಿಂದುತ್ವವಾದಿ ಸಂಘಟನೆಗಳು ಬೆಂಬಲ ಘೋಷಿಸಿವೆ.

50ಕ್ಕೂ ಹೆಚ್ಚು ಸಂಘಟನೆಗಳು ನೀಡಿರುವ ಬಂದ್ ಕರೆ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್ ಕರೆ ಕುರಿತು ಜಾಗೃತಿ ಮೂಡಿಸಲು ನಾಗರಿಕ ಒಕ್ಕೂಟದ ಕಾರ್ಯಕರ್ತರು 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಹಂಚಲು ಮುಂದಾಗಿದ್ದಾರೆ. ಅಂಗಡಿ, ಬ್ಯಾಂಕ್, ಶಾಲಾ-ಕಾಲೇಜು, ಮಾಲ್​ಗಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಹಿಂದುತ್ವವಾದಿ ಸಂಘಟನೆಗಳ ಮುಖಂಡರಾದ ಮೋಹನ್ ಗೌಡ, ಭಾಸ್ಕರನ್ ಕರಪತ್ರ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಾಮರಾಜಪೇಟೆ ಬಂದ್​ಗೆ ಬೆಂಬಲ ನೀಡುವಂತೆ ಮೈಕ್ ಅಳವಡಿಸಿರುವ ಆಟೊಗಳ ಮೂಲಕವೂ ಮನವಿ ಮಾಡಲಾಗುತ್ತಿದೆ. ನಾಳೆ ಒಂದು ದಿನದ ಮಟ್ಟಿಗೆ ಅಂಗಡಿ ಮುಂಗಟ್ಟು ತೆರೆಯಬೇಡಿ. ಮೈದಾನದ ಉಳಿವಿಗಾಗಿ ಕೈಜೋಡಿಸಿ ಎಂದು ಮುಖಂಡರು ಚಾಮರಾಜಪೇಟೆ ಕ್ಷೇತ್ರದ ಎಲ್ಲ 7 ವಾರ್ಡ್​ಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಛಲವಾದಿಪಾಳ್ಯ, ಕೆ.ಆರ್.ಮಾರ್ಕೆಟ್, ಆಜಾದ್​ನಗರ ವಾರ್ಡ್, ಚಾಮರಾಜಪೇಟೆ, ಪಾದರಾಯನಪುರ, ರಾಯಪುರ ವಾರ್ಡ್, ಜೆಜೆಆರ್​ ನಗರ ವಾರ್ಡ್​​ಗಳಲ್ಲಿ ಮೈಕ್ ಕಟ್ಟಿರುವ ಆಟೊಗಳು ಸಂಚರಿಸುತ್ತಿವೆ.

Published On - 9:00 pm, Mon, 11 July 22