ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿರಂತರ ಒಂದು ವರ್ಷದ ಕಾರ್ಯಾಚರಣೆ ಬಳಿಕ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬರೋಬ್ಬರಿ 1 ವರ್ಷಕ್ಕೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ಆರೋಪಿಯ ರೇಖಾ ಚಿತ್ರ ರಚಿಸಿ ತಲಘಟ್ಟಪುರ ಪಿಎಸ್ಐ ಶ್ರೀನಿವಾಸ್ ಮತ್ತು ತಂಡ ಕಾರ್ಯಾಚರಣೆಗೆ ಇಳಿದಿದ್ರು. ಸದ್ಯ ಒಂದು ವರ್ಷದ ಬಳಿಕ ಆರೋಪಿ ಸಿಕ್ಕಿದ್ದು ಮಗುವನ್ನು ಕಳ್ಳತನ ಮಾಡಿದ್ದು ಓರ್ವ ಮನೋವೈದ್ಯೆ ಎಂಬುವುದು ತಿಳಿದು ಬಂದಿದೆ. ಉತ್ತರ ಕರ್ನಾಟಕ ಮೂಲದ ಮನೋವೈದ್ಯೆಯೇ ಆಟೋದಲ್ಲಿ ಬಂದು ಮಗು ಕದ್ದು ಹೋಗಿದ್ದು 15 ಲಕ್ಷಕ್ಕೆ ಮಗು ಕೊಡೋದಾಗಿ ದುಡ್ಡು ಪಡೆದಿದ್ದರು. ಸದ್ಯ ಪೊಲೀಸರ ತಂಡ ಮಗು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೇ 29, 2020 ರಂದು ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನವಾಗಿದ್ದು ಮೇ 29, 2021 ರಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಘಟನೆ ಹಿನ್ನಲೆ
ಕಳೆದ ವರ್ಷ ಅಂದ್ರೆ 2020 ರ ಮೇನಲ್ಲಿ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಆಗ ತಾನೇ ಜನ್ಮ ನೀಡಿದ್ದ ಮಗುವನ್ನು ಕಳ್ಳತನ ಮಾಡಲಾಗಿತ್ತು. ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆಟೋದಲ್ಲಿ ಪರಾರಿಯಾಗಿದ್ದಳು. ಆರೋಪಿ ಮಹಿಳೆಯ ಸ್ಕೆಚ್ ತಯಾರಿಸಿ ನೂರಾರು ಜನರ ವಿಚಾರಣೆ ನಡೆಸಲಾಗಿತ್ತು. ನೂರಾರು ಫೋನ್ ನಂಬರ್ ಟ್ರ್ಯಾಕ್ ಮಾಡಲಾಗಿತ್ತು. ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಸದ್ಯ ಈಗ ಈ ಪ್ರಕರಣಕ್ಕೆ ಕೊನೆ ಸಿಕ್ಕಿದೆ.
ಇನ್ನು ಮಗು ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ತಂದೆ ನವೀದ್ ಪಾಷ ಮತ್ತು ತಾಯಿ ಹುಸ್ನಾಬಾನು ಸಂತಸ ಹಂಚಿಕೊಂಡಿದ್ದಾರೆ. ತಾಯಿ ಹೆತ್ತ ಕರಳು ಸಿಕ್ಕ ಸುದ್ದಿ ಕೇಳಿ ಕಣ್ಣೀರು ಹಾಕಿದ್ರು. ಒಂದು ವರ್ಷದ ಬಳಿಕ ಮಗು ಸಿಕ್ಕಿದೆ. ಆದರೆ ಇನ್ನೂ ಪೊಲೀಸರು ಈ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಟೆಸ್ಟ್ಗಳನ್ನ ಮಾಡಬೇಕು ಅಂತಾ ಹೇಳಿದ್ದಾರೆ. ಆಮೇಲೆ ಅದು ನಮ್ಮ ಮಗನಾ ಅನ್ನೋದು ಗೊತ್ತಾಗಲಿದೆ. ನಮ್ಮದೆ ಮಗು ಅನ್ನೋದು ಇನ್ನೂ ಖಚಿತವಾಗಿಲ್ಲ ಎಂದು ಟಿವಿ9ಗೆ ಮಗು ಪೋಷಕರಾದ ನವೀದ್ ಪಾಷ ಮತ್ತು ಹುಸ್ನಾಬಾನು ತಿಳಿಸಿದ್ದಾರೆ.
ಇದನ್ನೂ ಓದಿ: Newborn Baby Stolen Case: ನವಜಾತ ಶಿಶು ಕಳ್ಳತನ ಪ್ರಕರಣ: 9 ತಿಂಗಳು ಕಳೆದ್ರೂ ಸಿಕ್ಕಿಲ್ಲ ಮಕ್ಕಳ ಕಳ್ಳಿ
Published On - 8:50 am, Mon, 31 May 21