ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ; ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ
ಅದು ಮಕ್ಕಳ ಆಸ್ಪತ್ರೆ.. ಪ್ರತಿದಿನವೂ ನೂರಾರು ಹೆರಿಗೆ ಆಗುತ್ತೆ. ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ. ಇಂತಹದೊಂದು ಹಾಸ್ಪಿಟಲ್ಗೆ ಹೊಸದೊಂದು ಗರಿ ಸೇರಿಕೊಂಡಿದೆ. ಮಕ್ಕಳ ಮೇಲೆ ಕೊರೊನಾ ವ್ಯಾಕ್ಸಿನ್ ಟ್ರಯಲ್ಗೆ ಆಯ್ಕೆ ಆಗಿದ್ದು, ಆಸ್ಪತ್ರೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದಾರೆ.
ಮೈಸೂರು: ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ನಡೆದಿತ್ತು. 12 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಜೀವನ್ ರೇಖಾ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಪ್ರಯೋಗ ನಡೆದಿತ್ತು. ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿ ಪಡಿಸಿರುವ ಝೈಕೋವ್ ಡಿ (ZyCoV-D) ಲಸಿಕೆಯ ಕ್ಲಿನಿಕಲ್ ಟ್ರಯಲ್ ಇದಾಗಿತ್ತು. ಸದ್ಯ ಈಗ ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ಪ್ರಯೋಗಕ್ಕೆ ಸಿದ್ಧತೆ ಶುರುವಾಗಿದೆ.
ಚೆಲುವಾಂಬ ಮಕ್ಕಳ ಆಸ್ಪತ್ರೆ.. ಮೈಸೂರು ಮಹಾರಾಜರ ಕೊಡುಗೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಆಸ್ಪತ್ರೆಗೆ ಹೊಸದೊಂದು ಗರಿ ಮೂಡಿದೆ. ದೇಶಾದ್ಯಂತ 5 ಆಸ್ಪತ್ರೆಗಳನ್ನು ಕೊರೊನಾ ವ್ಯಾಕ್ಸಿನ್ ಮಕ್ಕಳ ಮೇಲಿನ ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ. ಅದ್ರಲ್ಲಿ ಕ್ಲಿನಿಕಲ್ ಟ್ರಯಲ್ಗೆ ಆಯ್ಕೆಯಾಗಿರುವ ಕರ್ನಾಟಕದ ಮತ್ತೊಂದು ಆಸ್ಪತ್ರೆ ಚೆಲುವಾಂಬ ಆಸ್ಪತ್ರೆ. ಸದ್ಯ ಚೆಲುವಾಂಬ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ಗೆ ಸಿದ್ದತೆ ನಡೆದಿದ್ದು, ಆಸ್ಪತ್ರೆ ವೈದ್ಯರು ಉತ್ಸುಕರಾಗಿದ್ದಾರೆ.
ಇನ್ನು, ದೇಶಾದ್ಯಂತ ಈಗಾಗಲೇ 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಲಸಿಕೆ ಸಿಕ್ಕಿದೆ. 18 ರಿಂದ 45 ವರ್ಷದೊಳಗಿನವರಿಗೂ ವ್ಯಾಕ್ಸಿನ್ ಸಿಗುತ್ತಿದೆ. ಇದೆಲ್ಲದರ ನಡುವೆ ಕೊರೊನಾ 3ನೇ ಅಲೆ ಮಕ್ಕಳಿಗೆ ಎಫೆಕ್ಟ್ ಆಗುತ್ತೆ ಅಂತಾ ವೈರಲಾಸಿಸ್ಟ್ಗಳು ಅಂದಾಜಿಸಿದ್ದಾರೆ. ಹೀಗಾಗಿ ಮಕ್ಕಳಿಗೂ ವ್ಯಾಕ್ಸಿನ್ ನೀಡುವ ಮೂಲಕ ರೋಗ ನಿಯಂತ್ರಣ ಮಾಡಬೇಕು ಅನ್ನೋದು ಭಾರತ ಸರ್ಕಾರದ ಉದ್ದೇಶ. ಹೀಗಾಗಿ ಮಕ್ಕಳ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಲು ಮೈಸೂರಿನ ಚೆಲುವಾಂಬ ಆಸ್ಪತ್ರೆಯನ್ನ ಆಯ್ಕೆ ಮಾಡಲಾಗಿದೆ. ಅದು ಕೂಡ ಈ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ಹೆರಿಗೆ ಆಗುತ್ತಿವೆ. ಕೊರೊನಾ ಸೋಂಕು ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡಿದ ಅನುಭವವು ಇಲ್ಲಿನ ವೈದ್ಯಾಧಿಕಾರಿಗಳಿಗೆ ಇದೆ. ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಚೆಲುವಾಂಬ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ.
ಸದ್ಯ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಟ್ಟು 60 ಮಕ್ಕಳಿಗೆ ವ್ಯಾಕ್ಸಿನ್ ಪ್ರಯೋಗಿಸಲಾಗುವುದು. ಪ್ರತಿ ಬಾರಿಯೂ ಅವರ ರಕ್ತದ ಮಾದರಿಯನ್ನು ಪರಿಶೀಲನೆ ಮಾಡುವ ಮೂಲಕ ದೇಹದಲ್ಲಿ ಆಂಟಿ ಬಾಡೀಸ್ ಬದಲಾವಣೆಯನ್ನು ಗಮನಿಸಲಾಗುವುದು ಅಂತ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಏನೇ ಇರಲಿ, ಕ್ಲಿನಿಕಲ್ ಟ್ರಯಲ್ ಗೆ ಆಯ್ಕೆ ಮಾಡಿಕೊಂಡ 5 ಆಸ್ಪತ್ರೆಗಳ ಪೈಕಿ ಚೆಲುವಾಂಬ ಕೂಡ ಒಂದು ಎನ್ನುವುದು ಮೈಸೂರಿಗೆ ಹೆಮ್ಮೆಯ ವಿಚಾರ.
ಇದನ್ನೂ ಓದಿ: ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ! ಸದ್ಯ ಅಡ್ಡ ಪರಿಣಾಮ ಬೀರಿಲ್ಲ; ಮುಂದೇನು?