ಬೆಂಗಳೂರು/ಮೈಸೂರು, (ಡಿಸೆಂಬರ್ 17): ಮುಡಾ ಪ್ರಕರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಡದ ಕಾರ್ಯದರ್ಶಿ ರೂಪ ಅವರು ನೀಡಿದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ , ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಚಾಮುಂಡೇಶ್ವರಿ ದೇವಿಗೆ ಬಂದಿರುವ ಹರಕೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಆದರೆ ಈ ದೂರು ದಾಖಲಿಸಿಕೊಳ್ಳದೇ ಸ್ನೇಹಮಯಿ ಕೃಷ್ಣ ವಿರುದ್ಧವೇ ಕಾರ್ಯದರ್ಶಿ ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ದೇವಿಗೆ ಹಾಕಿದ್ದ ಸೀರೆ ಮಾರಾಟವಾಗಿದ್ದರೆ ಅಕ್ಷಮ್ಯ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಎಫ್ಐಆರ್ಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ಚಾಮುಂಡೇಶ್ವರಿ ಸೀರೆ ವಿವಾದ: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು
ಇನ್ನು ಈ ಬಗ್ಗೆ ಟಿವಿ9ಗೆ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ನನ್ನ ಹೋರಾಟವನ್ನ ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಚಾಮುಂಡೇಶ್ವರಿ ದೇವಿ ಸೀರೆ ವಿಚಾರವಾಗಿ ದೂರು ಕೊಟ್ಟಿದ್ದೆ. ಇದೇ ವಿಚಾರವಾಗಿ ಸ್ಥಳ ಮಹಜರು ನಡೆಸಿದ್ದರು. ಆದ್ರೆ, ಇದೇ ವಿಚಾರವಾಗಿ ನನ್ಮೇಲೆ ಸುಳ್ಳು FIR ದಾಖಲಿಸಿದ್ದಾರೆ ಎಂದು ಡಿಸಿಪಿ ಮುತ್ತುರಾಜ ವಿರುದ್ಧ ಆರೋಪಿಸಿದ್ದಾರೆ.
ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಕಾಣಿಕೆಯಾಗಿ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಚಾಮುಂಡೇಶ್ವರಿ ದೇವಾಲಯದ ಕಾರ್ಯದರ್ಶಿ ರೂಪಾ ಅವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡದ್ದರು. ಈ ಬಗ್ಗೆ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದರು. ಚಾಮುಂಡೇಶ್ವರಿ ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಅವರ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋದ ಸಿಡಿಯನ್ನು ದೂರಿನೊಂದಿಗೆ ಲಗ್ಗತ್ತಿಸಿದ್ದರು.ಆದ್ರೆ, ಎಫ್ಐಆರ್ ಮಾತ್ರ ದಾಖಲಾಗಿಲ್ಲ.
ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಚಾಮುಂಡೇಶ್ವರಿ ದೇವಿಯ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದರು. ಸ್ನೇಹಮಯಿ ಕೃಷ್ಣ ಅವರು ನೀಡಿದ್ದ ವಿಡಿಯೋ ದೃಶ್ಯಾವಳಿಗಳು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನಲ್ಲೇ ರೂಪಾ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ಸರ್ಕಾರಿ ಕೆಲಸಕ್ಕೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರು ದಾಖಲಿಸಿದ್ದರು. ಈ ದೂರಿ ಮೇರೆಗೆ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Tue, 17 December 24