ಸಾವರ್ಕರ್ ಫ್ಲೆಕ್ಸ್​ ಗಲಾಟೆ ಆದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು: ವಿರೋಧಿಗಳ ಕುತಂತ್ರಕ್ಕೆ ಚಂದ್ರಶೇಖರ್ ಬಲಿಯಾದ ಎಂದ ರೇಣುಕಾಚಾರ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 04, 2022 | 11:01 AM

ನನ್ನ ಮಗನಿಗೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವನು ಸಾಯುವ ಮೊದಲು ತುಂಬಾ ಹಿಂಸೆ ಅನುಭವಿಸಿದ್ದಾನೆ ಎಂದು ಮೃತ ಚಂದ್ರಶೇಖರ್ ತಾಯಿ ಅನಿತಾ ಹೇಳಿದರು.

ಸಾವರ್ಕರ್ ಫ್ಲೆಕ್ಸ್​ ಗಲಾಟೆ ಆದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು: ವಿರೋಧಿಗಳ ಕುತಂತ್ರಕ್ಕೆ ಚಂದ್ರಶೇಖರ್ ಬಲಿಯಾದ ಎಂದ ರೇಣುಕಾಚಾರ್ಯ
ಮೃತ ಚಂದ್ರಶೇಖರ್ ಅಜ್ಜಿಯನ್ನು ಸಂತೈಸುತ್ತಿರುವ ಕುಟುಂಬ ಸದಸ್ಯರು
Follow us on

ದಾವಣಗೆರೆ: ನನ್ನ ತಮ್ಮನ ಮಗ ಚಂದ್ರಶೇಖರ್ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ. ಶಿವಮೊಗ್ಗದ ಸಾವರ್ಕರ್​ ಫ್ಲೆಕ್ಸ್​​ ವಿವಾದಲ್ಲಿಯೂ ಮುಂಚೂಣಿಯಲ್ಲಿದ್ದ. ಸಾವರ್ಕರ್ ಫ್ಲೆಕ್ಸ್​ ಗಲಾಟೆ ಆದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಚಂದ್ರಶೇಖರ್ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಆಗಲೇ ನಾಪತ್ತೆ ಪ್ರಕರಣ ದಾಖಲಿಸಿದ್ದೆವು. ಈಗ ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದೇವೆ. ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಇಂಥ ಕೆಲಸ ಮಾಡಿದ್ದಾರೆ. ನನ್ನ ವೈರಿಗಳು ನನ್ನನ್ನೇ ಬಲಿ ತೆಗೆದುಕೊಳ್ಳಬೇಕಿತ್ತು. ಅದುಬಿಟ್ಟು ಹೀಗೆ ಹುಡುಗನನ್ನು ಹೊಡೆದು ಹಾಕಿರುವುದು ಸರಿಯಲ್ಲ ಎಂದು ಕಣ್ಣೀರು ಹಾಕಿದರು.

ಅವನು ನನ್ನನ್ನು ತಂದೆಯಂತೆ ಪ್ರೀತಿಸುತ್ತಿದ್ದ. ಹಿಂದುತ್ವದ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದ. ನನ್ನನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬೇಡಿ. ವೀರಶೈವ ಪದ್ಧತಿಯ ಬದಲಾಗಿದೆ ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನೆರವೇರಿಸಬೇಕು. ನಾನು ಜಾತ್ಯತೀತ ವ್ಯಕ್ತಿ, ನನ್ನನ್ನು ಒಂದು ಸಮುದಾಯಕ್ಕೆ ಸೀಮಿತನನ್ನಾಗಿಸಬೇಡಿ. ಹಿಂದುತ್ವ ನನ್ನ ಉಸಿರು ಎಂದು ರೇಣುಕಾಚಾರ್ಯ ಹೇಳಿದರು.

ಮೃತ ಚಂದ್ರಶೇಖರ್ ತಾಯಿ ಅನಿತಾ ಮಾತನಾಡಿ, ಮಗ ಗೌರಿಗದ್ದೆಗೆ ಹೋಗಿದ್ದೇ ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ನಿನ್ನೆ ಶವವಾಗಿ ನೋಡಿದ್ದೇನೆ. ನನ್ನ ಮಗನಿಗೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವನು ಸಾಯುವ ಮೊದಲು ತುಂಬಾ ಹಿಂಸೆ ಅನುಭವಿಸಿದ್ದಾನೆ. ಯಾರ ಮಕ್ಕಳಿಗೂ ಇಂಥ ಪರಿಸ್ಥಿತಿ ಬರಬಾರದು ಎಂದು ಕಣ್ಣೀರು ಹಾಕಿರು. ಮೃತನ ಅಜ್ಜಿ ಜಯಮ್ಮ ಮತ್ತು ದೊಡ್ಡಮ್ಮ ಸುಜಾತಾ ಸಹ ಮೊಮ್ಮಗನ ಸರಳತೆ ನೆನಪಿಸಿಕೊಂಡು ಕಣ್ಣೀರಿಟ್ಟರು.

ಅಂತ್ಯಸಂಸ್ಕಾರಕ್ಕೆ ಸಿದ್ಧತೆ

ಹಿರೇಕಲ್ಮಠದ ಅನ್ನದಾನಿ ಶ್ರೀಗಳ ನೇತ್ರತ್ವದಲ್ಲಿ ಮೃತದೇಹದ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಇವೆ. ಈ ವೇಳೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ‘ಚಂದ್ರು ಬರೋ, ಚಂದ್ರು ಬಾರೋ, ನಮ್ಮ ಚಂದ್ರು’ ಎಂದು ಎಲ್ಲರೂ ಜೋರಾಗಿ ಕೂಗಿ ಕರೆಯುತ್ತಾ ಕಣ್ಣೀರಿಟ್ಟರು. ‘ನಿನ್ನ ಪೋಟೋ ನೋಡಬೇಕಲ್ಲ ಅಪ್ಪಾ’ ಎಂದು ರೇಣುಕಾಚಾರ್ಯ ಹೇಳಿದರು. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್​ಎಸ್​ಎಲ್) ಏಳು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗತ್ಯ ಪುರಾವೆಗಳನ್ನು ಸಂಗ್ರಹಿಸುವ ಕಾರ್ಯಾಚರಣೆ ಆರಂಭಿಸಿದರು.

ಅಸಹಜ ಸಾವಿನ ಅನುಮಾನ

ಚಂದ್ರಶೇಖರ್ ಸಾವು ಸಹಜವಲ್ಲ, ಕೊಲೆ ಎಂಬ ರೇಣುಕಾಚಾರ್ಯ ಹೇಳಿಕೆಯು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಚಂದ್ರಶೇಖರ್ ಕಾರು ನಾಲೆಗೆ ತನ್ನಿಂತಾನೆ ನಾಲೆಗೆ ಬಿದ್ದಿಲ್ಲ. ಅದನ್ನು ತಳ್ಳಿದ್ದಾರೆ. ಚಂದ್ರಶೇಖರ್ ತಲೆಗೆ ಮಚ್ಚಿನಿಂದ ಹೊಡೆದು, ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಕ್ಕೆ ಪೂರಕವಾಗಿ ಅವರು ನೀಡುತ್ತಿರುವ ವಿವರಗಳಿವು.

ಚಂದ್ರು ಮೈಮೇಲೆ ಹಲ್ಲೆಯ ಗುರುತುಗಳು ಇವೆ. ಚಂದ್ರು ಕಾರು ಟಾಪ್ ಗೇರ್​ನಲ್ಲಿ 80-90 ಕಿಲೋಮೀಟರ್ ಸ್ಪೀಡ್​ನಲ್ಲಿ ಬಂದು ಮೈಲಿಗಲ್ಲಿಗೆ ಗುದ್ದಿದ್ದರೆ ಕಾರು ಪಲ್ಟಿ ಆಗಬೇಕಿತ್ತು. ಕಾರಿನ ಎರಡೂ ಏರ್ ಬ್ಯಾಗ್ ಓಪನ್ ಆಗಿದೆ, ಆದರೆ ಚಂದ್ರು ದೇಹ ಕಾರಿನ ಹಿಂಭಾಗದಲ್ಲಿ ಸಿಕ್ಕಿದೆ. ಚಂದ್ರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಅಲ್ಲೇ ಸಿಲುಕಬೇಕಿತ್ತು ಎಂದು ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾರು ನ್ಯಾಮತಿ ಪಾಸ್ ಆಗುವಾಗ ಕಾರಿನ ಮುಂಭಾಗ ಇಬ್ಬರು ಇದ್ದರು ಎಂಬ ಅನುಮಾನವೂ ವ್ಯಕ್ತವಾಗಿದೆ. ಆ ಇಬ್ಬರೂ ಸೀಟ್ ಬೆಲ್ಟ್ ಹಾಕಿಕೊಂಡು ಗಾಡಿ ಅಪಘಾತ ಮಾಡಿಸಿ, ನಂತರ ಏರ್​ಬ್ಯಾಗ್ ಓಪನ್ ಆದ್ಮೇಲೆ ಟಾಪ್ ಗೇರ್​ಗೆ ಹಾಕಿ ಕಾರನ್ನು ನಾಲೆಗೆ ನೂಕಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.