Charmadi Ghat: ಚಾರ್ಮಾಡಿ ವೈಭವದ ಈ ದೃಶ್ಯ ನೋಡಿದರೆ ಇಲ್ಲಿಗೆ ಪ್ರವಾಸಕ್ಕೆ ಹೊರಡೋಡು ಖಚಿತ

| Updated By: preethi shettigar

Updated on: Jun 20, 2021 | 5:46 PM

ಅಲೇಖಾನ್ ಬಳಿಯಿಂದ ಶುರುವಾಗುವ ಜಲಪಾತಗಳ ಚಿತ್ತಾರ ಚಾರ್ಮಾಡಿವರೆಗೂ ದಾರಿಯುದ್ದಕ್ಕೂ ಕಣ್ಣಿಗೆ ಹಬ್ಬ, ಮನಸಿಗೆ ಹಿತವನ್ನು ನೀಡುತ್ತದೆ. ಅದರಲ್ಲೂ ಬಂಡೆಗಳ ಮೇಲಿಂದ ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಪರಮಾನಂದ ಎಂದು ಪ್ರವಾಸಿ ಇರ್ಫಾನ್ ಅಭಿಪ್ರಾಯಪಟ್ಟಿದ್ದಾರೆ.

Charmadi Ghat: ಚಾರ್ಮಾಡಿ ವೈಭವದ ಈ ದೃಶ್ಯ ನೋಡಿದರೆ ಇಲ್ಲಿಗೆ ಪ್ರವಾಸಕ್ಕೆ ಹೊರಡೋಡು ಖಚಿತ
ಚಾರ್ಮಾಡಿ ಘಾಟ್
Follow us on

ಚಿಕ್ಕಮಗಳೂರು: ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರೇ ಇಲ್ಲ. ಅದರಲ್ಲೂ ಮಳೆಗಾಲದಲ್ಲಿ ಗುಡ್ಡಗಾಡು ಪ್ರದೇಶಗಳು, ಜಲಪಾತಗಳು, ನದಿಗಳು ಮೈತುಂಬಿ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಕೊಳ್ಳುತ್ತವೆ. ಅದರಲ್ಲೂ ಮುಂಗಾರು ಮಳೆಯ ಸಿಂಚನದಿಂದ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆಯ ನೈಜ ಸೊಬಗನ್ನು ಅನಾವರಣಗೊಳಿಸಿದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡುಗರನ್ನು ತಣಿಸಿದೆ. ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳು ಹೊಸದೊಂದು ಲೋಕವನ್ನೇ ಸೃಷ್ಟಿಮಾಡಿವೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಮುಂಗಾರು ಮಳೆಯ ಸಿಂಚನದಿಂದ ಜಲಪಾತಗಳು ಜೀವ ಕಳೆಯನ್ನು ಪಡೆದುಕೊಂಡಿವೆ. ಬಂಡೆಗಳ ಮೇಲಿನಿಂದ ಜುಳು-ಜುಳು ನಿನಾದ ಗೈಯುತ್ತಾ ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ನಿಸರ್ಗ ಪ್ರಿಯರ ಸ್ವರ್ಗವಾಗಿ ಮಾರ್ಪಟ್ಟಿದೆ. ಕಳೆದ ಎರಡು ತಿಂಗಳ ಸತತ ಮಳೆಯಿಂದ ಚಾರ್ಮಾಡಿ ಘಾಟ್​ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಚಾರ್ಮಾಡಿ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ ಗಳನ್ನು ಕಣ್ತುಂಬಿಸಿಕೊಂಡು ಖುಷಿ ಪಟ್ಟಿದ್ದಾರೆ.

ಅಲೇಖಾನ್ ಬಳಿಯಿಂದ ಶುರುವಾಗುವ ಜಲಪಾತಗಳ ಚಿತ್ತಾರ ಚಾರ್ಮಾಡಿವರೆಗೂ ದಾರಿಯುದ್ದಕ್ಕೂ ಕಣ್ಣಿಗೆ ಹಬ್ಬ, ಮನಸಿಗೆ ಹಿತವನ್ನು ನೀಡುತ್ತದೆ. ಅದರಲ್ಲೂ ಬಂಡೆಗಳ ಮೇಲಿಂದ ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಪರಮಾನಂದ ಎಂದು ಪ್ರವಾಸಿ ಇರ್ಫಾನ್ ಅಭಿಪ್ರಾಯಪಟ್ಟಿದ್ದಾರೆ.

ದಟ್ಟವಾದ ಮಂಜು, ಚುಮು ಚುಮು ಚಳಿ, ಮಧ್ಯದಲ್ಲಿ ಬರೋ ಮಳೆಯ ಮಧ್ಯೆ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ತರಿಸುತ್ತೆ. ಒಟ್ಟಾರೆ ಚಾರ್ಮಾಡಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆಯ ಕವಲು. ಪ್ರಕೃತಿ ಮಾತೆಯ ನಿಸರ್ಗ ಚೆಲುವು. ಈ ಬೆರಗು ಜಗತ್ತನ್ನು, ಕಣ್ಮನ ಸೆಳೆಯುವ ಜಲಪಾತಗಳನ್ನು ಕಣ್ತುಂಬಿಸಿಕೊಳ್ಳಲು ನೀವು ಮಲೆನಾಡಿಗೆ ಬರಬೇಕು. ಆದರೆ ಸದ್ಯ ಕೊರೊನಾದ ಕರಿನೆರಳು ಇರುವುದರಿಂದ ಸ್ವಲ್ಪ ದಿನಗಳ ನಂತರ ಬಂದರೆ ಉತ್ತಮ, ಮಳೆಗಾಲ ಇನ್ನೂ ಎರಡ್ಮೂರು ತಿಂಗಳು ಇರುವುದರಿಂದ ಫಾಲ್ಸ್​ಗಳ ಜೀವಕಳೆ ಅಲ್ಲಿವರೆಗೆ ಹಸಿರಾಗಿರುತ್ತದೆ.

ಇದನ್ನೂ ಓದಿ:

ಚಿಕ್ಕಮಗಳೂರಿನಲ್ಲಿ ಅಪರೂಪದ ಕಾಡುಪಾಪ ದರ್ಶನ.. ನಾಯಿಗಳಿಂದ ರಕ್ಷಿಸಿ, ಸೆಲ್ಫಿ ಕ್ಲಿಕ್ಕಿಸಿ ಸಂತಸಪಟ್ಟ ಜನ

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ