ಬೆಂಗಳೂರು: ಬಂಕಾಪುರ ತೋಳ ವನ್ಯಜೀವಿಧಾಮ ಘೋಷಣೆಗೆ ಒಪ್ಪಿಗೆ ಸಿಕ್ಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ವಲಯದ ಬಂಕಾಪುರ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು ಘೋಷಿಸಲು ಅನುಮತಿ ಸಿಕ್ಕಿದೆ. ಹೀಗಾಗಿ ಇದು ರಾಜ್ಯದ ಮೊದಲ ತೋಳ ವನ್ಯಜೀವಿ ಧಾಮ ಆಗಲಿದೆ. ಜೊತೆಗೆ ಚಿತ್ರದುರ್ಗ ವಿಭಾಗದ ಹಿರಿಯೂರು, ಹೊಳಲ್ಕೆರೆಯಲ್ಲಿರುವ ಉತ್ತಾರೆಗುಡ್ಡ ವನ್ಯಜೀವಿ ಧಾಮ ಎಂದು ಘೋಷಿಸಲು ಒಪ್ಪಿಗೆ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ಒಪ್ಪಿಗೆ ಸಿಕ್ಕಿದೆ. ಇನ್ನು ಇದೇ ವೇಳೆ ಕೊಪ್ಪಳದಲ್ಲಿ ಹಿಡಿಸುಲೆಕೆರೆ ಕರಡಿ ಧಾಮ, ಆಲಮಟ್ಟಿಚಿಕ್ಕ ಸಂಗಮ ಪಕ್ಷಿ ಧಾಮ ಎಂದು ಘೋಷಿಸಲು ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಅರಣ್ಯ ವಾಸಿಗಳನ್ನು ಈಗ ಗುರುತಿಸಿರುವ ಪ್ರದೇಶ ಬಿಟ್ಟು ಸ್ಥಳಾಂತರಿಸಲು ಬೇರೆ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ದರೋಜಿ ಕರಡಿ ಧಾಮದ ಮೂಲಕ ಕಮಲಾಪುರ ಹೋಬಳಿಯ ಬುಕ್ಕ ಸಾಗರ, ಕಣಿವೆ ತಿಮ್ಮಾಪುರ ಹಾಗೂ ಇತರೆ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಒಪ್ಪಿಗೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳ ಕೆರೆಗಳಿಗೆ ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ಕಾಮಗಾರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ. ಇನ್ನು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ಕೊಪ್ಪ ತಾಲೂಕು ಮೆಣಸಿನ ಹಾಡ್ಯ ಸುತ್ತಮುತ್ತಲು ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡಲಾಗಿದೆ.
ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಪ್ರಸ್ತಾವ ಕೈಬಿಡಲು ನಿರ್ಧಾರ
ಹೆಸರುಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವ ಕೈಬಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಈ ಹಿಂದಿನ ಸಭೆಯಲ್ಲೂ ಬಿಡಿಎ ಅಧ್ಯಕ್ಷ ಆಗಿರುವ ಎಸ್. ಆರ್. ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಇಂದಿನ ಸಭೆಯಲ್ಲಿ ಎಸ್.ಆರ್.ವಿಶ್ವನಾಥ್ ಪುತ್ರ, ವನ್ಯಜೀವಿ ಮಂಡಳಿ ಸದಸ್ಯ ಅಲೋಕ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ತೀವ್ರ ವಿರೋಧ ಹಿನ್ನೆಲೆಯಲ್ಲಿ ಈ ಪ್ರಸ್ತಾವವನ್ನೇ ಕೈಬಿಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ರಾಮನಗರ ಬಳಿಯ ಹಂದಿಗುಂದಿ ಮೀಸಲು ಅರಣ್ಯ ಪ್ರದೇಶದ 4,167 ಎಕರೆ ಪ್ರದೇಶವನ್ನು ಕರಡಿ ಧಾಮ ಎಂದು ಘೋಷಿಸುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆದಿದ್ದು ಯಾವುದೇ ತೀರ್ಮಾನ ತೆಗೆದುಕೊಳ್ಳದೇ ರಾಜಕೀಯ ಒತ್ತಡ, ಸ್ಥಳೀಯರ ವಿರೋಧದಿಂದ ಮುಂದೂಡಲಾಗಿದೆ.
ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಾಂಗ್ರೆಸ್ನಿಂದ ಇಂದು ರಾಜಭವನ ಚಲೋ..
Published On - 7:45 am, Wed, 20 January 21