ರಾಜೀವ್​​ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪತ್ರ: ಆ್ಯಸಿಡ್​​ ಎರಚುವುದಾಗಿ ಎಚ್ಚರಿಕೆ

ಕಾಂಗ್ರೆಸ್​​ ಮುಖಂಡ ರಾಜೀವ್​​ ಗೌಡನಿಂದ ನಿಂದನೆ, ಬೆದರಿಕೆ ಎದುರಿಸಿದ್ದ ಶಿಡ್ಲಘಟ್ಟ ಪೌರಾಯುಕ್ತ ಅಮೃತಾಗೆ ಆ್ಯಸಿಡ್ ಎರಚುವುದಾಗಿ ಹೊಸ ಬೆದರಿಕೆ ಪತ್ರ ಬಂದಿದೆ. ರಾಜೀವ್ ಗೌಡ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸ್ವಪಕ್ಷ ಕಾಂಗ್ರೆಸ್‌ನಲ್ಲಿಯೇ ಆಕ್ರೋಶ ಭುಗಿಲೆದ್ದಿದ್ದು, ರಾಜೀವ್ ಗೌಡ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಈ ನಡುವೆ ನಡೆದಿರುವ ಹೊಸ ಬೆಳವಣಿಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜೀವ್​​ ಗೌಡ ಪರ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಪತ್ರ: ಆ್ಯಸಿಡ್​​ ಎರಚುವುದಾಗಿ ಎಚ್ಚರಿಕೆ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ
Edited By:

Updated on: Jan 22, 2026 | 2:34 PM

ಚಿಕ್ಕಬಳ್ಳಾಪುರ, ಜನವರಿ 22: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಬಂಧನ ಇನ್ನೂ ಆಗಿಲ್ಲ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ತಂಡಗಳಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಹೀಗಿದ್ದರೂ ಈ ನಡುವೆ ಪುಂಡಾಟ ಮಾತ್ರ ಮುಂದುವರಿದಿದೆ. ಆ್ಯಸಿಡ್​​ ಎರಚುವುದಾಗಿ ಶಿಡ್ಲಘಟ್ಟ ಪೌರಾಯುಕ್ತೆಗೆ ಮತ್ತೆ ಬೆದರಿಕೆ ಹಾಕಲಾಗಿದ್ದು, ಆರೋಪಿ ರಾಜೀವ್ ಗೌಡ ಪರ ಪತ್ರ ಬರೆದು ಎಚ್ಚರಿಕೆ ನೀಡಿರುವ ಬಗ್ಗೆ ಪೌರಾಯುಕ್ತೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬೆದರಿಕೆ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಾಂಗ್ರೆಸ್​​ ಮುಖಂಡರಿಂದಲೇ ಆಕ್ರೋಶ

ಪೌರಾಯುಕ್ತೆಗೆ ನಿಂದಿಸಿ, ಬೆದರಿಕೆ ಹಾಕಿರುವ ಪ್ರಕರಣ ವಿಚಾರವಾಗಿ ರಾಜೀವ್​​ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್​​ನಲ್ಲಿಯೇ ಆಕ್ರೋಶ ಭುಗಿಲೆದ್ದಿದೆ. ಆತ ನಡೆದುಕೊಂಡಿರುವ ರೀತಿಯಿಂದ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ನಷ್ಟವಾಗ್ತಿದ್ದು, ಪೊಲೀಸರು ಶೀಘ್ರ ಸೂಕ್ತಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು; ರಾಜೀವ್ ಗೌಡಗೆ ಕೋರ್ಟ್ ತರಾಟೆ

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

ಪೌರಾಯುಕ್ತೆಗೆ ಬೆದರಿಕೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಜೀವ್ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಚಿಕ್ಕಬಳ್ಳಾಪುರ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಮತ್ತೆ ನಡೆಯಲಿದೆ. ನಿರೀಕ್ಷಣಾ ಜಾಮೀನಿಗಾಗಿ ರಾಜೀವ್ ಗೌಡ ಪರ ವಕೀಲ ಶಿವಶಂಕರರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್‌, ವಿಚಾರಣೆಯನ್ನ ಜನವರಿ 22ಕ್ಕೆ ಅಂದರೆ ಇಂದಿಗೆ ಮುಂದೂಡಿತ್ತು.

ಅಮಾನತಿಗೆ ಶಿಫಾರಸು

ಪಕ್ಷದ ಮುಖಂಡನ ವರ್ತನೆ ಆಡಳಿತರೂಢ ಕಾಂಗ್ರೆಸ್​​ಗೆ ಮುಜುಗರ ತಂದ ಹಿನ್ನೆಲೆ, ಆರೋಪಿ ರಾಜೀವ್​ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಅದಕ್ಕೆ ನಾಪತ್ತೆಯಾಗಿರುವ ರಾಜೀವ್​​ ಗೌಡ ಉತ್ತರಿಸದ ಕಾರಣ ಆತನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:04 pm, Thu, 22 January 26