ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. ರಾಜಕಾಲುವೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಕಂದವಾರ ಕೆರೆಯಿಂದ ಅಮಾನಿಕೆರೆವರೆಗೆ ರಾಜಕಾಲುವೆ ನಿರ್ಮಾಣ ಮಾಡುತ್ತೇವೆ. ನೀರು ನುಗ್ಗಿರುವ ಮನೆಗೆ 10 ಸಾವಿರ ಪರಿಹಾರಕ್ಕೆ ಸೂಚನೆ ಕೊಡಲಾಗಿದೆ. ಮಳೆಯಿಂದ ಮನೆ ಸಂಪೂರ್ಣ ಬಿದಿದ್ರೆ 5 ಲಕ್ಷ ಪರಿಹಾರ ನೀಡಲಾಗುವುದು. ಮಳೆಯಿಂದ ಮನೆ ಭಾಗಶಃ ಬಿದಿದ್ರೆ 3 ಲಕ್ಷ ರೂ. ಪರಿಹಾರ ನೀಡುತ್ತೇವೆ. ಜಿಲ್ಲೆಯಲ್ಲಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿತವಾಗಿವೆ. ಹಾನಿ ಕುರಿತು ಚಿಕ್ಕಬಳ್ಳಾಪುರ ಡಿಸಿ ವರದಿಯನ್ನು ನೀಡಿದ್ದಾರೆ. ವರದಿ ಆಧರಿಸಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮಳೆಯಿಂದ 5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ರಾಜ್ಯದಲ್ಲಿ ಮಳೆಯಿಂದ 40 ಸಾವಿರ ಮನೆಗಳು ಬಿದ್ದಿವೆ. ಬಿದ್ದ ಮನೆಗಳಿಗೆ ಪರಿಹಾರ ನೀಡಲು ಡಿಸಿಗಳಿಗೆ ಸೂಚಿಸಿದ್ದೇನೆ. ಸಂಪೂರ್ಣ ಬಿದ್ದ ಮನೆಗೆ ತಾತ್ಕಾಲಿಕವಾಗಿ 95 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ. ಹಾನಿ ಬಗ್ಗೆ ಸಂಪೂರ್ಣ ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಮೊದಲಿಗೆ ರಸ್ತೆ, ಸೇತುವೆ ಕಾಮಗಾರಿ ಪೂರ್ಣ ಮಾಡುತ್ತೇವೆ. ಒಡೆದು ಹೋಗಿರುವ ಕೆರೆಗಳ ಶಾಶ್ವತ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಆನೆಮಡಗು ಗ್ರಾಮ ಕೆರೆ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಸೂಚನೆಯನ್ನ ನೀಡಿದ್ದೇನೆ. ಮಳೆಯಿಂದ ಬೆಳೆ ಹಾನಿ ಪರಿಹಾರದ ಬಗ್ಗೆ ಸಭೆ ನಡೆಸುತ್ತೇನೆ. ಬೆಂಗಳೂರಿಗೆ ಹೋಗಿ ಕಂದಾಯ ಸಚಿವರ ಜತೆ ಸಭೆ ಮಾಡ್ತೇನೆ. ಎಲ್ಲ ಸಚಿವರಿಗೂ ಜಿಲ್ಲೆಗಳಿಗೆ ಹೋಗಿ ಪರಿಶೀಲಿಸಲು ಸೂಚನೆ ಕೊಡಲಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಸೂಚಿಸಿದ್ದೇನೆ. ಸಚಿವರ ಭೇಟಿ ವೇಳೆ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಚುನಾವಣಾ ಅಧಿಕಾರಿಗಳಿಗೆ ನಾನು ಪತ್ರವನ್ನು ಬರೆದಿದ್ದೇನೆ. ಕೋಲಾರ ಸೇರಿದಂತೆ ಬೇರೆ ಕಡೆ ಹೋಗಿ ಪರಿಶೀಲಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಂದ ಬರ್ಬಾದ್ ಸಮಾವೇಶ ಅನ್ನೊ ಸಿದ್ದು ಟೀಕೆ ವಿಚಾರವಾಗಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಚಿವರು ಜಿಲ್ಲೆಯಲ್ಲಿ ಇದ್ದಾರೆ. ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಗಳಲ್ಲಿ ಕೆಲಸ ಮಾಡ್ತಿದ್ದಾರೆ. ಮಳೆ ಹಾನಿ ವಿಡಿಯೊ ಸಂವಾದ ನಡೆಸಲು ಚುನಾವಣಾ ಆಯೋಗದ ಅನುಮತಿ ಬೇಕು ಅಂದ್ರು. ಇನ್ನೂ ಕೆಲವರು ಕೆಲವು ಜಿಲ್ಲೆಗಳಿಗೆ ಪ್ರವಾಸ ಹೋಗಬೇಕು. ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ನೀತಿ ಸಂಹಿತೆ ಅಡ್ಡ ಇದೆ. ವಿನಾಯಿತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸಿಎಂ ಬೊಮ್ಮಾಯಿ ಮಳೆ ಹಾನಿ ವೀಕ್ಷಣೆ ಮಾಡಿದ್ದಾರೆ. ಕಂದವಾರ ಕೆರೆ ಕೋಡಿ ಬಿದ್ದು ಹಾನಿಯಾದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಡಿಸಿ, ಸಿಇಒ, ಎಸ್ಪಿಯಿಂದ ಸಿಎಂ ಬೊಮ್ಮಾಯಿಗೆ ಮಾಹಿತಿ ನೀಡಲಾಗಿದೆ. ಸಿಎಂಗೆ ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಕೋಲಾರ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಸಾಥ್ ನೀಡಿದ್ದಾರೆ.
ಅತಿವೃಷ್ಟಿ ಪ್ರವಾಸವನ್ನು ಸಿಎಂ ಬೊಮ್ಮಾಯಿ ಮೊಟಕುಗೊಳಿಸಿದ್ದಾರೆ. ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿನತ್ತ ತೆರಳಿದ್ದಾರೆ. ಬೆಂಗಳೂರಿನಲ್ಲಿ ತುರ್ತು ಸಭೆ ಹಿನ್ನೆಲೆ ಪ್ರವಾಸ ಮೊಟಕು ಮಾಡಿದ್ದಾರೆ. ಮಳೆ ಹಾನಿ ಬಗ್ಗೆ ಚರ್ಚಿಸಲು ಸಿಎಂ ತುರ್ತು ಸಭೆ ಕರೆದಿದ್ದಾರೆ. ಸಂಜೆ 7 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ ನಡೆಸಿದ್ದಾರೆ. ಗೃಹ ಇಲಾಖೆ, ಜಲಸಂಪನ್ಮೂಲ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ವಸತಿ ಇಲಾಖೆ ಮುಖ್ಯಸ್ಥರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಕೊಪ್ಪಳ: ಗೋವುಗಳಿಗೆ ಔಷಧ, ಮೇವು ಪೂರೈಸಲು ವ್ಯವಸ್ಥೆ ಮಾಡುವುದಾಗಿ ಭರವಸೆ
ನಡುಗಡ್ಡೆಯಲ್ಲಿ ಗೋವುಗಳು ಸಿಲುಕಿ ಪರದಾಡುತ್ತಿರುವ ವಿಚಾರ ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಪುರಕ್ಕೆ ಪಶು ವೈದ್ಯಾಧಿಕಾರಿ ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿರುವ ಮಾರ್ಕಂಡೇಶ್ವರ ದೇಗುಲ ಸಮೀಪ ಸಿಲುಕಿರುವ ಗೋವುಗಳಿಗೆ ಔಷಧ, ಮೇವು ಪೂರೈಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಲಾಗಿದೆ. ತೆಪ್ಪದ ಮೂಲಕವಾಗಿ ತೆರಳಿ ಗೋವುಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಟಿಬಿ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ಗೋವುಗಳು ಸಿಲುಕಿ ಹಾಕಿಕೊಂಡಿವೆ.
ಇದನ್ನೂ ಓದಿ: Bengaluru News: ಬೆಂಗಳೂರು ನಗರದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ ಸಾಧ್ಯತೆ
ಇದನ್ನೂ ಓದಿ: ಅಕಾಲಿಕ ಮಳೆಗೆ ಮೂಕ ಪ್ರಾಣಿಗಳ ರೋಧನೆ; ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಗೋವುಗಳು
Published On - 5:28 pm, Sun, 21 November 21