ಅದು ರಾಜಧಾನಿ ಬೆಂಗಳೂರಿನ ಪಕ್ಕದಲ್ಲೆ ಇರುವ ಪ್ರಕೃತಿ ಸೊಬಗಿನ ಸುಂದರ ತಾಣ, ಆ ತಾಣದಲ್ಲೊಂದು ಸೂಸೈಡ್ ಸ್ಪಾಟ್ ಇದೆ. ಅಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಅಂತ ಸರ್ಕಾರ ಹತ್ತು ಅಡಿ ಎತ್ತರದ ಗೋಡೆ ನಿರ್ಮಿಸಿದೆ. ಆದ್ರೂ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಮಗನ ಜೊತೆ ಅಲ್ಲಿಗೆ ಹೋಗಿ ಮಗನ ಕೈಲ್ಲಿ ಮೊಬೈಲ್, ಚಿನ್ನಾಭರಣಗಳನ್ನು ನೀಡಿ ಸೆಲ್ಫಿ ವೀಡಿಯೊವನ್ನು ಮಾಡಿ ಇನ್ನೇನು ನಾಲ್ಕು ಸಾವಿರ ಅಡಿಗಳಿಂದ ಧುಮುಕ ಬೇಕಿತ್ತು… ಅಷ್ಟರಲ್ಲಿ ಆಗಿದ್ದೇ ಬೇರೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನ್ ಅಂತೀರಾ ಈ ವರದಿ ನೋಡಿ!!
ನನ್ನ ಗಂಡ, ಅತ್ತೆ, ಅವರ ಸಂಬಂಧಿಕರು ಸೇರಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ನನ್ನ ಗಂಡ ನವೀನ್ ಕಾರಣ ಅಂತ ಸೆಲ್ಫಿ ವೀಡಿಯೊ ಮಾಡಿ… ಮಗನ ಕಣ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಈ ಮಹಿಳೆಯ ಹೆಸರು ಕಾವ್ಯಾ, ಬೆಂಗಳೂರಿನ ಕೆ.ಆರ್. ಪುರಂ ಮೂಲದ ಗೃಹಿಣಿ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ತನ್ನ ಮಗನ ಜೊತೆ ಆಗಮಿಸಿ ಮೈಮೇಲಿದ್ದ ಚಿನ್ನಾಭರಣಗಳು ಮೊಬೈಲ್ ಪರ್ಸ್ ನ್ನು ಮಗನ ಕೈಯಲ್ಲಿ ಕೊಟ್ಟು ಇನ್ನೇನು ನಂದಿಗಿರಿಧಾಮದ ಟಿಪ್ಪು ಡ್ರಾಪ್ ನಿಂದ ಕೆಳಗೆ ಜಿಗಿಯಬೇಕಿತ್ತು ಅಷ್ಟರಲ್ಲಿ ಆಕೆಯ ಮಗ ಜೋರಾಗಿ ಕಿರುಚಿಕೊಂಡಿದ್ದಾನೆ. ಆಗ ಅಲ್ಲೆ ಇದ್ದ ಪ್ರವಾಸಿ ಮಿತ್ರ ಸಿಬ್ಬಂದಿ ನಳಿನಿ ಅನ್ನೊ ಮಹಿಳೆ ತಕ್ಷಣ ಸಾರ್ವಜನಿಕರ ಸಹಾಯದಿಂದ ಕಾವ್ಯಾರನ್ನು ರಕ್ಷಿಸಿ ಮನವೊಲಿಸಿದ್ದಾರೆ.
ನಂದಿಗಿರಿಧಾಮದ ಟಿಪ್ಪು ಡ್ರಾಪ್ ಹಾಗೂ ಅಕ್ಕಪಕ್ಕದಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಮೇಲಿಂದ ಜಿಗಿಯಬಾರದು ಅಂತ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಹತ್ತು ಅಡಿ ಎತ್ತರದ ತಡೆಗೋಡೆ ಹಾಕಿಸಿದೆ. ಆದ್ರೂ ಇತ್ತೀಚೆಗೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಆಗಮಿಸಿ, ಕೊನೆಗೆ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೋಟೆಲ್ನಲ್ಲಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯ ಬಂಧನ
ಒಟ್ನಲ್ಲಿ ಸುಂದರ ಪ್ರಕೃತಿ, ತುಂತುರು ಮಳೆ, ಮಂಜು ಕವಿದ ಆಹ್ಲಾದಕರ ವಾತಾವರಣ ಸವಿಯೋಣ ಅಂತ ಕೆಲವರು ಗಿರಿಧಾಮಕ್ಕೆ ಆಗಮಿಸಿದ್ರೆ… ಇನ್ನೂ ಕೆಲವರು ಆತ್ಮಹತ್ಯೆಗೆ ಅಂತ ಗಿರಿಧಾಮಕ್ಕೆ ಆಗಮಿಸುತ್ತಿರುವುದು ದುರಾದೃಷ್ಟಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ