ಚಿಕ್ಕಬಳ್ಳಾಪುರ: ಗಲೀಜು ವ್ಯಕ್ತಿಗಳ ಪರ ಸಿಎಂ ಬಿಎಸ್ವೈ ನಿಂತಿದ್ದಾರೆ ಎಂದು ಉಪಚುನಾವಣೆ ಸಮ್ಮುಖದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂಥ ಕೆಟ್ಟ ಹುಳುಗಳನ್ನು ಸೇರಿಸಿಕೊಂಡು ರಾಜ್ಯ ಅಭಿವೃದ್ಧಿ ಮಾಡ್ತಾರಂತೆ. ಹುಣಸೂರಿನಲ್ಲಿ ಒಬ್ಬ, ಗೋಕಾಕ್ ನಲ್ಲಿ ಒಬ್ಬ.. ಥೂ ಗಲೀಜುಗಳು ಅಂತಾ ಕುಮಾರಸ್ವಾಮಿ ಲೇವಡಿ ಮಾಡಿದರು.
ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಾ?
ಸಿದ್ದರಾಮಯ್ಯ, ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ರು. ಆದರೆ ಬಜೆಟ್ ನಲ್ಲಿ ಹಣ ಇಟ್ಟಿರಲಿಲ್ಲ. ಇದಕ್ಕೆ ನಾನು ಹಣ ಕೊಟ್ಟಿದ್ದೆ. ಯಡಿಯೂರಪ್ಪ ಭರಪೂರ ಹಣ ಕೊಡ್ತಾರೆ ಅಂತಾ ಹೇಳ್ತಾರೆ, ತಗೊಂಡು ಬರ್ಲಿ ನೋಡೋಣ. ಮೆಡಿಕಲ್ ಕಾಲೇಜು ನಿರ್ಮಾಣದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಾ? ನೀಟ್ ನಲ್ಲಿ ಪಾಸ್ ಆದ್ರೆ ಮಾತ್ರ ಸೀಟು ಸಿಗುತ್ತೆ ಎಂದು ಹೇಳಿದರು.
ಸುಧಾಕರ್ ವಿರುದ್ಧ HDK ವಾಗ್ದಾಳಿ:
ಸಭೆಯಲ್ಲಿ ಮಾತನಾಡುತ್ತ ಲಿಂಗಾಯತ ಸಮಾಜದವರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಳಿದ್ದಾರೆ, ಈ ಮಾತನ್ನೇ ಇಂದು ಸಹ ಮುಂದುವರೆಸಿದ್ದಾರೆ. ಬಿಎಸ್ ವೈ ಈ ರಾಜ್ಯದ ಮುಖ್ಯಮಂತ್ರಿಯೋ ಅಥವಾ 15 ಜನ ಅನರ್ಹರಿಗೆ ಮುಖ್ಯಮಂತ್ರಿಯೋ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಅದೇ ಕಾರಣಕ್ಕೆ ಲಿಂಗಾಯತ ಸಮಾಜ ಒಗ್ಗಟ್ಟಾಗಿ ಅಂತಾ ಹೇಳ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಇರೋದು ಸುಧಾಕರ್ ಗೆ ಇಷ್ಟವಿರಲಿಲ್ಲ, ಸುಧಾಕರ್ ಒಂದು ಕಡೆ ಹೇಳ್ತಾನೆ ನನ್ನ ಸಂಬಂಧಿ ಅಂತ ಮತ್ತೊಂದು ಕಡೆ ಹೇಳ್ತಾನೆ ನಾನು ಮುಖ್ಯಮಂತ್ರಿಯಾಗಿ ಇರಬಾರದು ಅಂತಾ. ಸುಧಾಕರ್ ಮೊದಲು ನನ್ನ ಹಿಡ್ಕೊಂಡಿದ್ದ, ಆಮೇಲೆ ಸಿದ್ದರಾಮಯ್ಯನ್ನ ಹಿಡಿದುಕೊಂಡ.. ಈಗ ಯಡಿಯೂರಪ್ಪನ್ನ ಹಿಡಿದುಕೊಂಡಿದ್ದಾನೆ. ಸುಧಾಕರ್ ನನಗೆ ಮಂತ್ರಿ ಸ್ಥಾನ ಕೊಟ್ಟುಬಿಡಿ, ನಾನು ಜಿಲ್ಲೆಯಲ್ಲಿ ಜೆಡಿಎಸ್ ಬೆಳೆಸುತ್ತೇನೆ ಅಂತಾ ನನ್ನ ಬಳಿ ಬಂದಿದ್ದ. ಜಾತಿ ಹೆಸರಲ್ಲಿ ನಾನು ರಾಜಕಾರಣ ಮಾಡಲ್ಲ, ಬೇರೆ ಸಮಾಜಗಳ ಬೆಂಬಲ ಇಲ್ಲದಿದ್ರೆ ರಾಜಕಾರಣ ಸುಲಭವಲ್ಲ ಎಂದಿದ್ದೆ ಎನ್ನುವ ಮೂಲಕ ಸುಧಾಕರ್ ವಿರುದ್ಧ HDK ಹರಿಹಾಯ್ದರು.