ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 30: ಸಿಜರಿಯನ್ ಹೆರಿಗೆ ಮಾಡಿಸಲು ಲಂಚ ಕೇಳಿದ ಆರೋಪ ಒಂದಡೆಯಾದರೆ, ಮತ್ತೊಂದಡೆ ಆಸ್ಪತ್ರೆಗೆ ಬಂದ ಗಾಯಾಳು ವೃದ್ದನಿಗೆ ಸಕಾಲಕ್ಕೆ ಚಿಕಿತ್ಸೆ ನೀಡದೇ ಸತಾಯಿಸಿದ ಘಟನೆಗಳ ಕುರಿತು ‘ಟಿವಿ 9 ಡಿಜಿಟಲ್’ನಲ್ಲಿ ವರದಿ ಪ್ರಸಾರವಾದ ಹಿನ್ನೆಲೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳು ಹಾಗೂ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (Chikkaballapur Medical College Hospital) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿ ವೇಳೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕರ್ಮಕಾಂಡಗಳು ಒಂದೊಂದಾಗಿ ಬಯಲಾದವು.
ಚಿಕ್ಕಬಳ್ಳಾಪುರ ನಗರದಲ್ಲಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಸಿಜರಿಯನ್ ಹೆರಿಗೆ ಮಾಡಲು ಗೌರಿಬಿದನೂರು ಮೂಲದ ಬಾಣಂತಿಯ ಜೊತೆ ಲಂಚಕ್ಕಾಗಿ ಬೇಡಿಕೆ ಹಾಗೂ ಅಪರಿಚಿತ ವೃದ್ದನೋರ್ವ ರಸ್ತೆಯಲ್ಲಿ ಬಿದ್ದು, ಆಸ್ಪತ್ರೆಗೆ ಆಗಮಿಸಿದರೆ ಚಿಕಿತ್ಸೆ ನೀಡದೇ ಸತಾಯಿಸಿದ ಕುರಿತು ಟಿವಿ-9 ಡಿಜಿಟಲ್ ನಲ್ಲಿ ವರದಿ ಪ್ರಕಟವಾದ ಹಿನ್ನೆಲೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರಾದ ಶ್ರೀಮತಿ ಅರುಣಾ ಕುಮಾರಿ ಯವರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದರು.
ಇನ್ನು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲನೆ ನಡೆಸಿದರು. ಹೆರಿಗೆ ಮಾಡಿಸಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಮಹಿಳೆಯೋರ್ವಳು ಹೇಳಿದರು ಆದರೆ ಅವರ ಮಗ ಇಲ್ಲವೆಂದು ತಡಬಡಾಯಿಸಿದ. ಇನ್ನು ಆಸ್ಪತ್ರೆಯಲ್ಲಿ ಬಿಸಿನೀರು, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ವಹಣೆ ಇಲ್ಲದಿರುವುದು, ಅವಧಿ ಮೀರಿದ ಔಷಧಿಗಳು ಸೇರಿದಂತೆ ಕೆಲವು ವೈದ್ಯರು ಇಲ್ಲದಿರುವುದು ಕಂಡುಬಂದಿತು. ನಂತರ ಮಾತನಾಡಿದ ವೈದ್ಯಕೀಯ ಕಾಲೇಜಿನ ಡೀನ್ ಡಾ|| ಮಂಜುನಾಥ್ ಯಾರೋ ಕೆಲವೊಬ್ಬರು ಮಾಡುವ ಸಣ್ಣ ಕೆಲಸದಿಂದ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತದೆ. ವೈದ್ಯರು, ಸಿಬ್ಬಂದಿ ಲಂಚಕ್ಕೆ ಕೈವೊಡ್ಡಬೇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ವೃದ್ಧನಿಗೆ ಚಿಕಿತ್ಸೆ ನೀಡಲು ಸತಾಯಿಸಿದ ಸರ್ಕಾರಿ ವೈದ್ಯರು, ವ್ಹೀಲ್‍ಚೇರ್ ಕೊಡದೇ ಸತಾಯಿಸಿದ ಸಿಬ್ಬಂದಿ
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿವೆ. ಇದರಿಂದ ಪ್ರತಿ ತಿಂಗಳು ನಾನೇ ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸುತ್ತೇನೆಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶೆ ಅರುಣಕುಮಾರಿ ವೈದ್ಯರಿಗೆ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Sat, 30 September 23