ಚಿಕ್ಕಬಳ್ಳಾಪುರ: ಈ ಹಿಂದೆ ಬಳ್ಳಾರಿಯಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ಸುಗ್ಗಲ್ಲಮ್ಮ ದೇವಿ ಮಂದಿರವಿತ್ತು. ಅದನ್ನು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಉದ್ಯಮಿಗಳು ಸ್ವಾರ್ಥಕ್ಕಾಗಿ ಸೈಲೆಂಟಾಗಿ ವಕ್ಕಲೆಬ್ಬಿಸಿದ್ದರು. ಇಲ್ಲೂ ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ನಡೆದಿರುವ ಜಿಲೆಟಿನ್ ಸ್ಫೋಟದ ವೃತ್ತಾಂತ ಕೆದಕಿದಾಗ.. ಹತ್ತಿರದ ಪ್ರದೇಶದಲ್ಲಿದ್ದ ದೇವಸ್ಥಾನ ಮುಚ್ಚಿರುವುದು ಬೆಳಕಿಗೆ ಬಂದಿದೆ. ಕ್ರಷರ್ಗಳ ಹಾವಳಿಗೆ ಪುರಾತನ ಕಾಲದ ದೇಗುಲ ಮುಚ್ಚಿಹೋಗಿದೆ. ಇಷ್ಟೆಲ್ಲ ಅಕ್ರಮ ನಡೆದರೂ ಯಾರು ಪ್ರಶ್ನೆ ಮಾಡುತ್ತಿಲ್ಲ.
ಫೆ. 22ರಂದು ತಡ ರಾತ್ರಿ 12.45ರ ಸಮಯದಲ್ಲಿ ಹಿರೇನಾಗವೇಲಿ ಬಳಿ ಅಕ್ರಮ ಜಿಲೆಟಿನ್ ಸ್ಫೋಟಗೊಂಡಿದೆ. ಈ ದುರಂತದಲ್ಲಿ ಆರು ಮಂದಿ ಮೃತಪಟ್ಟಿದ್ದು ಒಬ್ಬರಿಗೆ ಗಾಯಗಳಾಗಿವೆ. ಈ ಘಟನೆಯ ಬೆನ್ನಲ್ಲೇ ಸ್ಥಳೀಯವಾಗಿ ನಡೆದಿರುವ ಮತ್ತೊಂದು ಅಕ್ರಮದ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಕ್ರಷರ್ ಆರಂಭಗೊಂಡ ಬಳಿಕ ಅದೇ ಪ್ರದೇಶದಲ್ಲಿದ್ದ ಪುರಾತನ ಹನುಮ ಮಂದಿರ ಮುಚ್ಚಲಾಗಿದೆಯಂತೆ! ಬೆಟ್ಟದ ಮೇಲಿದ್ದ ದೇಗುಲಕ್ಕೆ ಹೋಗುತ್ತಿದ್ದ ರಸ್ತೆ ಮೇಲೆ ಕ್ವಾರಿ ಮಾಡುವ ಮೂಲಕ ರಸ್ತೆಯನ್ನೇ ಬಂದ್ ಮಾಡಲಾಯಿತಂತೆ. ರಸ್ತೆ ಬಂದ್ ಹಿನ್ನೆಲೆಯಲ್ಲಿ ಆಂಜನೇಯ ದೇಗುಲಕ್ಕೆ ತೆರಳಲು ಭಕ್ತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಐದು ವರ್ಷಗಳಿಂದ ಭಕ್ತರು ಆಂಜನೇಯನ ದರ್ಶನವನ್ನೇ ಮಾಡಿಲ್ಲ!
ಪ್ರತಿ ಶ್ರಾವಣ ಶನಿವಾರಗಳಲ್ಲಿ ಬೆಟ್ಟದ ಮೇಲಿನ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರು ಜಾತ್ರೆ ಮಾಡ್ತಿದ್ದರಂತೆ. ಆದ್ರೆ ಬೆಟ್ಟದಲ್ಲಿ ಗಣಿಗಾರಿಕೆ ಆರಂಭವಾದ ನಂತರ ದೇವಸ್ಥಾನದ ಜಾಗವನ್ನು ಕ್ವಾರಿ ಮಾಲೀಕರು ನುಂಗಿದ್ದಾರೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.