Chikkaballapur Earthquake: ಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಲಘು ಭೂಕಂಪನ; ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಂದ ಪರಿಶೀಲನೆ

| Updated By: preethi shettigar

Updated on: Nov 10, 2021 | 8:40 AM

ರಾತ್ರಿ 8.50ರ ಸಮಯದಲ್ಲಿ 5 ನಿಮಿಷದ ಅಂತರದಲ್ಲಿ ಮೂರು ಭಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಮನೆಯಿಂದ ಆಚೆ ಬಂದ ಗ್ರಾಮಸ್ಥರು, ಮತ್ತೆ ಮನೆಯ ಒಳಗೆ ಹೋಗಲು ಆತಂಕ ವ್ಯಕ್ತಪಡಿಸಿದರು. ಕೊರೆಯುವ ಚಳಿ ಗಾಳಿಯ ಮಧ್ಯದಲ್ಲಿ ಕೆಲವರು ಮನೆಯಿಂದ ಆಚೆಯೆ ಇದ್ದು, ಜಾಗರಣೆ ಮಾಡಬೇಕಾಯಿತು.

Chikkaballapur Earthquake: ಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಲಘು ಭೂಕಂಪನ; ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಂದ ಪರಿಶೀಲನೆ
ಮನೆಯಲ್ಲಿದ್ದ ಪಾತ್ರೆಗಳು ನೆಲಕ್ಕೆ ಉರುಳಿ ಬಿದ್ದಿವೆ
Follow us on

ಚಿಕ್ಕಬಳ್ಳಾಫುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲ ಐದು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ (Earthquake) ಅನುಭವವಾಗಿದೆ. ಮಿಟ್ಟಹಳ್ಳಿ ಗ್ರಾಮಸ್ಥರಲ್ಲಿ ಕೆಲವರು ಅರಳಿ ಕಟ್ಟೆ ಮೇಲೆ ಕುಳಿತಿದ್ರೆ ಇನ್ನೂ ಕೆಲವರು ರಾತ್ರಿ ಊಟ ಮಾಡುತ್ತ ತಮ್ಮ ಪಾಡಿಗೆ ತಮ್ಮ ತಮ್ಮ ಮನೆಗಳಲ್ಲಿ ಇದ್ದರು. ನಿನ್ನೆ(ನ.9) ರಾತ್ರಿ 8.50ರ ಸಮಯದಲ್ಲಿ ಭೂಮಿಯಿಂದ ಭಾರಿ ಶಬ್ದ ಬಂದಿದೆ. ಏನಾಯಿತು ಎಂದು ಯೋಚನೆ ಮಾಡುವಷ್ಟರಲ್ಲಿ ಮನೆಯಲ್ಲಿದ್ದ ಪಾತ್ರೆಗಳು, ದೇವರ ಪೋಟೊಗಳು ಗಡ ಗಡ ಸದ್ದು ಮಾಡಿ, ನೆಲಕ್ಕೆ ಉರುಳಿ ಬಿದ್ದಿವೆ. ಇದರಿಂದ ಭಯ ಭೀತರಾದ ಗ್ರಾಮಸ್ಥರು ಊಟದ ತಟ್ಟೆ ಬಿಟ್ಟು ಮನೆಯಿಂದ ಆಚೆ ಓಡಿ ಬಂದಿದ್ದಾರೆ. ಏನಾಯಿತು ಎನ್ನುವಷ್ಟರಲ್ಲಿ ಎಲ್ಲರಿಗೂ ಒಂದೇ ಅನುಭವವಾಗಿದೆ. ನಮ್ಮ ಮನೆಯಲ್ಲೂ ಶಬ್ಧ ಬಂತು, ತೋಟದ ಹತ್ತಿರ ದನದ ದೊಡ್ಡಿ ಹತ್ತಿರ ಶಬ್ಧ ಬಂತು ಎಂದು ಮಾತನಾಡಿಕೊಳ್ಳುತ್ತಿರುವಾಗಲೇ, ಅಕ್ಕ ಪಕ್ಕದ ನಂದನವನ, ಅಪ್ಸನಹಳ್ಳಿ, ಗೋನೇನಹಳ್ಳಿ ಗ್ರಾಮಸ್ಥರು ತಮಗಾದ ಅನುಭವ ಹೇಳಿಕೊಂಡರು. ಎಲ್ಲರು ಭಯ ಭೀತರಾಗಿ ಮನೆಯಿಂದ ಹೊರಗೆ ಬಂದು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಸುತ್ತಮುತ್ತ ಗಣಿಗಾರಿಕೆ ಇಲ್ಲ
ಮಿಟ್ಟಹಳ್ಳಿ, ನಂದನವನ, ಅಪ್ಸನಹಳ್ಳಿ, ಗೋನೇನಹಳ್ಳಿ ಸೇರಿದಂತೆ ಸುತ್ತಮುತ್ತ 10 ಕೀಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೂ ಕಲ್ಲು ಕ್ವಾರಿ ಕ್ರಷರ್​ಗಳಿಲ್ಲ. ಎಲ್ಲಿಯೂ ಗಣಿಗಾರಿಕೆ ನಡೆಯುತ್ತಿಲ್ಲ. ಆದರೂ ಭೂಮಿಯಲ್ಲಿ ಸ್ಪೋಟಗೊಂಡ ಶಬ್ಧ ಕೇಳಿ ಕ್ಷಣಾರ್ಧದಲ್ಲಿ ಅಲ್ಲೊಲ ಕಲ್ಲೊಲವಾದ ಅನುಭವ ಎಲ್ಲರಿಗೂ ಆಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ
ಮಿಟ್ಟೇನಹಳ್ಳಿ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವದ ಕುರಿತು ಟಿವಿ9ನಲ್ಲಿ ವರದಿ ನೋಡಿದ ಚಿಕ್ಕಬಳ್ಳಾಪುರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಕೃಷ್ಣಮೂರ್ತಿ ಹಾಗೂ ಅಕ್ರಂ, ಮಿಟ್ಟೇನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಆದ ಅನುಭವದ ಕುರಿತು ಮಾಹಿತಿ ಪಡೆದಿದ್ದಾರೆ. ಇದೆ ಸಂದರ್ಭದಲ್ಲಿ ಟಿವಿ9ಗೆ ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಶ್ರೀಮತಿ ಕೃಷ್ಣವೇಣಿ, ಮಿಟ್ಟಹಳ್ಳಿ ಸುತ್ತಮುತ್ತ ಎಲ್ಲಿಯೂ ಯಾವುದೇ ಗಣಿಗಾರಿಕೆ ಇಲ್ಲ. ಸ್ಪೋಟಗೊಳ್ಳುವ ಸಾಧ್ಯತೆಯಿಲ್ಲ, ಲಘು ಭೂಕಂಪನವಾಗಿದ್ದರೆ ಯಾವುದೇ ಅಪಾಯವಾಗುವ ಸಂಭವವಿಲ್ಲ. ಮಿಟ್ಟಹಳ್ಳಿ ಸುತ್ತಮುತ್ತ ಸುರಕ್ಷಿತ ವಲಯವಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೂ ಘಟನೆಯನ್ನು ಪರಿಶೀಲಿಸಿ ವರದಿ ನೀಡಲು ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ರಾತ್ರಿಯಿಡಿ ಗ್ರಾಮಸ್ಥರ ಜಾಗರಣೆ
ರಾತ್ರಿ 8.50ರ ಸಮಯದಲ್ಲಿ 5 ನಿಮಿಷದ ಅಂತರದಲ್ಲಿ ಮೂರು ಭಾರಿ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಮನೆಯಿಂದ ಆಚೆ ಬಂದ ಗ್ರಾಮಸ್ಥರು ಮತ್ತೆ ಮನೆಯ ಒಳಗೆ ಹೋಗಲು ಆತಂಕ ವ್ಯಕ್ತಪಡಿಸಿದರು. ಕೊರೆಯುವ ಚಳಿ ಗಾಳಿಯ ಮಧ್ಯದಲ್ಲಿ ಕೆಲವರು ಮನೆಯಿಂದ ಆಚೆಯೆ ಇದ್ದು, ಜಾಗರಣೆ ಮಾಡಬೇಕಾಯಿತು.

ಭೂಮಿ ಕಂಪಿಸಿರುವ ಮಾಹಿತಿ ಪರಿಶೀಲಿಸಲು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಮಿಟ್ಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಸ್ಥಳಿಯರಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ರೀತಿ ಶಬ್ಧ ಬಂತು? ಮನೆಯಲ್ಲಿ ಯಾವ ರೀತಿ ಘಟನೆ ನಡೆಯಿತು? ಎಷ್ಟು ಮನೆಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ? ಎಷ್ಟು ಗ್ರಾಮಗಳಲ್ಲಿ ಆಗಿದೆ? ಸುತ್ತಮುತ್ತ ಯಾರಾದರೂ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರಾ? ಏನಾಗಿದೆ ಹೇಗೆ ಆಗಿದೆ ಎನ್ನುವ ಕುರಿತು ಪರಿಶೀಲನೆ ನಡೆಸಿದ್ದಾರೆ.

ಕಲ್ಲು ಕ್ವಾರಿ ಬ್ಲಾಸ್ಟಿಂಗ್ ಮಾಡಿದ್ದೆ ಭೂಮಿ ಕಂಪನಕ್ಕೆ ಕಾರಣ?
ಮಿಟ್ಟಹಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ 4 ಗಂಟೆಗೆ ಭೂಮಿ ಕಂಪಿಸಿದ ಅನುಭವ ಹಿನ್ನಲೆ, ಕೊಟಗಲ್ ನರಸಾಪುರ ಬಳಿ ರಾತ್ರಿ ಬ್ಲಾಸ್ಟಿಂಗ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಟಗಲ್ ನರಸಾಪುರ ಬಳಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಿದ್ದಾರೆ ಎಂದು ಕೋಟಗಲ್ ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಲಿ ಸಂಸದರೊಬ್ಬರ ಸಂಬಂಧಿಯ ಕಲ್ಲು ಕ್ವಾರಿ ಕ್ರಷರ್ ಸ್ಪೋಟ ಹಿನ್ನೆಲೆ ಸ್ಥಳದ ಸುತ್ತಮುತ್ತ 10 ಕೀಲೋ ಮೀಟರ್ ವ್ಯಾಪ್ತಿಯಲ್ಲಿ ಕಂಪನವಾಗಿದೆ ಎಂದು ಆರೋಪಿಸಲಾಗಿದೆ.

ವರದಿ: ಭೀಮಪ್ಪ ಪಾಟೀಲ್

Vijayapura Earthquake: ಕಳೆದ ಎರಡು ತಿಂಗಳುಗಳಿಂದ ಸರಣಿ ಭೂಕಂಪನ; ವಿಜ್ಞಾನಿಗಳ ತಂಡದಿಂದ ಸ್ಥಳ ಪರಿಶೀಲನೆ

Kalaburagi Earthquake: ಲಘು ಭೂಕಂಪನ; ಬೆಳಿಗ್ಗೆ 11.40ರ ಸುಮಾರಿಗೆ ಭೂಮಿಯಿಂದ ಭಾರೀ ಸದ್ದು

Published On - 8:16 am, Wed, 10 November 21