ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಇತಿಹಾಸದಲ್ಲಿಯೇ (Sidlaghatta) ದಂಪತಿಯ ಭೀಕರ ಕೊಲೆಯಾಗಿದೆ. ಹಳೆಯ ರೆಡ್ ಆಕ್ಸೈಡ್ ಮನೆಯಲ್ಲಿ ಗವಾಕ್ಷಿಯಿಂದ ಇಳಿದು ಕುಕೃತ್ಯವೆಸಗಲಾಗಿದೆ. ಮೇಲ್ನೋಟಕ್ಕೆ ಇದು Murder for Gain ಎನಿಸುತ್ತಿದ್ದು, ಪಾತಕಿಗಳು ಭಾರೀ ನಗನಾಣ್ಯ ದರೋಡೆ ಮಾಡಿದ್ದಾರೆ. ಈ ಜೋಡಿ ಹತ್ಯೆಗಳು (Double Murder) ಅತ್ಯಂತ ಭೀಕರವಾಗಿದ್ದು, ಶಿಡ್ಲಘಟ್ಟ ನಗರದ ಇತಿಹಾಸದಲ್ಲಿಯೇ ಇಷ್ಟೊಂದು ಭಯಾನಕವಾಗಿ ಹತ್ಯೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. ಸುಮಾರು ಮೂರು ದಶಕಗಳ ಹಿಂದೆ, ಈಗ ಘಟನೆ ನಡೆದಿರುವ ಸ್ಥಳಕ್ಕೆ ಸಮೀಪದಲ್ಲಿ, ಕೆಕೆ ಪೇಟೆಯಲ್ಲಿ 4 ದಶಕಗಳ ಹಿಂದೆ ಮಹಿಳೆಯೊಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. 1986ರಲ್ಲಿ ಮಹಿಳೆಗೆ ಚಿತ್ರ ಹಿಂಸೆ ನೀಡಿ, ಆಕೆಯ ಶವವನ್ನು ಮನೆಯಲ್ಲಿದ್ದ ಬಾವಿಯಲ್ಲಿ ಹಗ್ಗಕ್ಕೆ ಕಟ್ಟಿ ಇಳಿದುಬಿಡಲಾಗಿತ್ತು.
ದೊಂತಿ ಶ್ರೀನಿವಾಸಲು-ಪದ್ಮಾವತಿ ದಂಪತಿಯ ನಿಗೂಢ ಕೊಲೆ:
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ವಾಸವಿ ಕಲ್ಯಾಣ ಮಂಟಪದ ಹಿಂಭಾಗ ಕೋಮಟಿಗರ ಬೀದಿಯಲ್ಲಿ ವಾಸವಿದ್ದ ವೃದ್ದ ದಂಪತಿ ದೊಂತಿ ಶ್ರೀನಿವಾಸಲು(78) ಮತ್ತು ಪದ್ಮಾವತಿ (68) ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆರ್ಥಿಕವಾಗಿ ಅನುಕೂಲಸ್ಥರಾಗಿದ್ದ ಶ್ರೀನಿವಾಸಲು ದಂಪತಿ ತಮ್ಮಿಬ್ಬರು ಹೆಣ್ಣು ಮಕ್ಕಳನ್ನು ಬೆಂಗಳೂರಿಗೆ ವಿವಾಹ ಮಾಡಿಕೊಟ್ಟಿದ್ದು ನೆಮ್ಮದಿಯಾಗಿ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಬುಧವಾರ ತಡರಾತ್ರಿ ಮನೆಯ ಮುಂಬಾಗಿಲು ಅಥವಾ ಹಿಂಬಾಗಿಲಿಂದ ಬಾರದೆ, ಮನೆ ಮೇಲಿನ ಗವಾಕ್ಷಿಯಿಂದ ಮನೆಯೊಳಕ್ಕೆ ಪ್ರವೇಶಿಸಿರುವ ದುಷ್ಕರ್ಮಿಗಳು ದಂಪತಿಯನ್ನು ಮನಸೋ ಇಚ್ಚೆ ಥಳಿಸಿ, ಮನೆಯಲ್ಲಿದ್ದ ಬಲವಾದ ಆಯುಧದಿಂದ ಅವರ ಮೇಲೆ ದಾಳಿ ಮಾಡಿ, ಕೊಲೆ ಮಾಡಿ ಮನೆಯಲ್ಲಿದ್ದ ಹಣ, ಬೆಲೆಬಾಳುವ ಚಿನ್ನ ಬೆಳ್ಳಿ ಆಭರಣಗಳೊಂದಿಗೆ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾರೆ.
ದಿಢೀರನೆ ಗವಾಕ್ಷಿಯಿಂದ ಇಳಿದು ಮಾಡಿರುವ ಕೃತ್ಯವಲ್ಲ, ಸ್ಥಳ ಪರಿಚಯ ಇರುವವರಿಂದಲೇ ದುಷ್ಕೃತ್ಯ:
ಪಾತಕದ ಭೀಕರತೆ, ಮೋಡಸ್ ಆಪರಂಡಿಯನ್ನು ನೋಡಿದರೆ ಪಾತಕಿಗಳು ಮನೆಯನ್ನು ಮತ್ತು ಅದರಲ್ಲಿ ವಾಸವಾಗಿದ್ದ ದಂಪತಿಯನ್ನು ಚೆನ್ನಾಗಿ ಅಧ್ಯಯನ ಮಾಡಿ ಕರಾರುವಕ್ಕಾಗಿ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ದಿಢೀರನೆ ಗವಾಕ್ಷಿಯಿಂದ ಇಳಿದು ಮಾಡಿರುವ ಕೃತ್ಯ ಇದಲ್ಲ. ದರೋಡೆ ಮಾಡುವ ಉದ್ದೇಶದಿಂದಲೇ, ಸ್ಥಳ ಪರಿಚಯವಿರುವವರೇ ಈ ದುಷ್ಕೃತ್ಯವೆಸಗಿರುವುದು ಕಂಡುಬಂದಿದೆ.
ಯಾರ ತಂಟೆಗೂ ಹೋಗದೆ ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ವಾಸಿಸುತ್ತಿದ್ದ ಶ್ರೀನಿವಾಸಲು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಲಕ್ಷ್ಮಿ ಮತ್ತು ಕಿರಿಯ ಮಗಳು ಸುಷ್ಮಾ ಇಬ್ಬರನ್ನೂ ಅನುಕೂಲಸ್ಥ ಕುಟುಂಬಗಳಿಗೆ ಕೊಟ್ಟು ಮದುವೆ ಮಾಡಿದ್ದು ಎಲ್ಲರೂ ಸೌಖ್ಯವಾಗಿ ಜೀವನ ಸಾಗಿಸುತ್ತಿದ್ದರು. ಅಕ್ಕಪಕ್ಕದವರ ಮಾಹಿತಿ ಪ್ರಕಾರ ತಂದೆ ತಾಯಿ, ಮಕ್ಕಳು ಮತ್ತು ಅಳಿಯಂದಿರ ನಡುವೆ ಆಸ್ತಿ, ಹಣ, ಕೌಟುಂಬಿಕ ಜಗಳಗಳು ಯಾವುದೂ ಇಲ್ಲದೆ ನೆಮ್ಮದಿಯಾಗಿದ್ದರು ಎಂದು ತಿಳಿದು ಬಂದಿದೆ.
ಮನೆ ಕೆಲಸದಾಕೆ ಬಂದಾಗ…
ಬುಧವಾರ ಮಧ್ಯರಾತ್ರಿಯಲ್ಲಿ ಕೊಲೆಯಾಗಿದ್ದರೂ ಕೂಡ ಗುರುವಾರ ಬೆಳಗ್ಗೆ ವೃದ್ದ ದಂಪತಿಯ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಎಂದಿನಂತೆ ಬಂದು ಮುಂಬಾಗಿಲು ಬಡಿದಿದ್ದಾರೆ. ಕೂಗಿ ಎಬ್ಬಿಸಲು ಯತ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಹಿಂಬಾಗಿಲಿನ ಬಳಿ ಬಂದು ನೋಡಿದರೆ ಬಾಗಿಲು ತೆರೆದಿತ್ತು. ಮನೆಕೆಲಸದಾಕೆ ಒಳಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪಕ್ಕದ ಮನೆಯ ರಾಮು ಎಂಬಾತನಿಗೆ ತಿಳಿಸಲಾಗಿ, ಆತ ನಗರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಕ್ತದ ಮಡುವಿನಲ್ಲಿ ವೃದ್ಧ, ಅಮಾಯಕ ದಂಪತಿ…
ದುಷ್ಕರ್ಮಿಗಳಿಂದ ಕೊಲೆಯಾದ ವೃದ್ದ ದಂಪತಿಯ ಮೃತದೇಹಗಳು ಮನೆಯಲ್ಲಿ ಬೇರೆ ಬೇರೆ ಕಡೆ ಬಿದ್ದಿದ್ದವು. ಶ್ರೀನಿವಾಸಲು ಅವರನ್ನು ಬಚ್ಚಲು ಮನೆಯಲ್ಲಿ ಕೊಲೆ ಮಾಡಲಾಗಿದ್ದು ಅವರ ಮೈಮೇಲಿನ ಬಟ್ಟೆಗಳನ್ನು ಹರಿದು ಹಾಕಲಾಗಿದೆ. ಅವರ ಮಡದಿ ಪದ್ಮಾವತಿ ಅವರನ್ನು ನಡುಮನೆಯಲ್ಲಿ ಕೊಲೆ ಮಾಡಲಾಗಿದೆ. ಸಾವಿಗೂ ಮುನ್ನ ಪದ್ಮಾವತಿ ಅವರ ಮೇಲೆ ತೀವ್ರವಾಗಿ ದಾಳಿ ಮಾಡಲಾಗಿದೆ. ಕೂದಲು ಹಿಡಿದು ಕಂಬ ಮತ್ತು ಗೋಡೆಗೆ ಗುದ್ದಿಸಲಾಗಿದೆ. ಮೇಲಾಗಿ ತಲೆಗೆ ಬಲವಾದ ಆಯುಧದಿಂದ ಹೊಡೆದಿದ್ದು ಅವರು ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮನೆಯಲ್ಲಿ ದರೋಡೆ: ದುಷ್ಕರ್ಮಿಗಳು ದೊಂತಿ ಶ್ರೀನಿವಾಸಲು ದಂಪತಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಬೀರು, ಅಲ್ಮೇರಾ, ಕಪ್ಬೋರ್ಡ್ಗಳನ್ನೆಲ್ಲಾ ಜಾಲಾಡಿ ಅಪಾರ ಪ್ರಮಾಣದ ನಗನಾಣ್ಯ, ಬಂಗಾರದ ಆಭರಣಗಳ ಸಮೇತ ಪರಾರಿಯಾಗಿದ್ದಾರೆ.
ಸಿಸಿಟಿವಿ ಪರಿಶೀಲನೆ: ಕೊಲೆ ಮಾಡಿರುವ ಪಾತಕಿಗಳು ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲು ಎರಡನ್ನೂ ಡ್ಯಾಮೇಜ್ ಮಾಡದೆ ಚಾಣಾಕ್ಷತನದಿಂದ ಕೊಲೆ ಮಾಡಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಬೀದಿಯಲ್ಲಿನ ಸಿಸಿಟಿವಿ, ಡಿವಿಆರ್ಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
3 ತಂಡಗಳ ರಚನೆ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕೊಲೆಯಾದ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ್ದಾರೆ. ತಮ್ಮ ಪೊಲೀಸರೊಂದಿಗೆ ಇಡೀ ಮನೆಯನ್ನು ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ. ಕೊಲೆ ಸಂಬಂಧ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಮೂವರು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಇನ್ಸ್ಪೆಕ್ಟರ್ ಪುರುಷೋತ್ತಮ, ಇನ್ಸ್ಪೆಕ್ಟರ್ ಲಿಂಗರಾಜು ಮತ್ತುಇನ್ಸ್ಪೆಕ್ಟರ್ ರಾಜು ನೇತೃತ್ವದಲ್ಲಿ ತನಿಖಾ ತಂಡಗಳು ಪಾತಕಿಗಳ ಬೆನ್ನುಹತ್ತಿದ್ದಾರೆ.
-ಭೀಮಾ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ
Published On - 6:57 am, Fri, 11 February 22