
ಚಿಕ್ಕಬಳ್ಳಾಪುರ, (ಡಿಸೆಂಬರ್ 25): ಚಿತ್ರದುರ್ಗದಲ್ಲಿ ನಡೆದ ಭೀಕರ ದುರಂತದ ಆಘಾತ ಮಾಸುವ ಮುನ್ನವೇ, ಚಿಕ್ಕಬಳ್ಳಾಪುರದಲ್ಲಿ (Chikkaballapur) ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು. ಮೃತರು ಅಜ್ಜವಾರ ಗ್ರಾಮದ ಯುವಕರಾಗಿದ್ದು, ಒಂದೇ ಬೈಕಿನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು. ಇನ್ನು ಈ ಪೈಕಿ ನರಸಿಂಹಮೂರ್ತಿ ಹಾಗೂ ನಂದೀಶ್ ಅಣ್ಣತಮ್ಮಂದಿರು. ಚಿಕ್ಕಬಳ್ಳಾಪುರದಿಂದ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರು, ಅಜ್ಜವಾರ ಕ್ರಾಸ್‌ನಲ್ಲಿ ತಿರುವು ಪಡೆಯಲು ಯತ್ನಿಸಿದ್ದಾರೆ. ಆದರೆ ವೇಗವಾಗಿ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಗುದ್ದಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ನರಸಿಂಹ ಕೇವಲ ಆರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 pm, Thu, 25 December 25