Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ
ಅದು ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಆದ್ರೆ ಆ ವೇಳೆಗೆ ನಡೆದ ವಿಧಿಯಾಟ ಹಲವರ ಬದುಕನ್ನ ಅಂತ್ಯಗೊಳಿಸಿದೆ. ಇನ್ನು ಕೆಲವರು ಆಸ್ಪತ್ರೆಯ ಬೆಡ್ ಮೇಲೆ ನರಳಾಡುವಂತೆ ಮಾಡಿದೆ. ನುಗ್ಗಿ ಬಂದ ಲಾರಿ ಡಿಕ್ಕಿಯಾಗಿ ರಸ್ತೆಯಲ್ಲೇ ಬಸ್ ಧಗಧಗಿಸಿದ ಪರಿಣಾಮ, ನಾಳೆಯ ಕನಸು ಕಂಡಿದ್ದವರು ಅಲ್ಲೇ ಭಸ್ಮವಾಗಿದ್ದಾರೆ.

ಚಿತ್ರದುರ್ಗ, ಡಿಸೆಂಬರ್ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಸ್ಲೀಪರ್ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಸೇರಿ ಬಸ್ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ತಾಯಿ ಮಗು ದಾರುಣ ಸಾವು
ಇನ್ನು ಅಪಘಾತದಲ್ಲಿ ಬದುಕುಳಿದ ಒಬ್ಬೊಬ್ಬ ಪ್ರಯಾಣಿಕರ ಕತೆಯೂ ರೋಚಕವಾಗಿದೆ. ಒಂದೇ ಐಟಿ ಕಂಪನಿಯ 6 ಮಂದಿ ಸಹೋದ್ಯೋಗಿಗಳು ಬೆಂಕಿಯ ಕೆನ್ನಾಲೆಯ ನಡುವೆ ಸಿಲುಕಿ ಒದ್ದಾಡಿದ್ದಾರೆ. ಕವಿತಾರ ಮದುವೆ ನಿಗದಿಯಾಗಿರುವ ಹಿನ್ನೆಲೆ ಬ್ಯಾಚುಲರ್ ಪಾರ್ಟಿಗೆಂದು ಇವರು ಗೋಕರ್ಣಕ್ಕೆ ತೆರಳುತ್ತಿದ್ದರು. ಅಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಪಾರ್ಟಿಯೂ ನಿಗದಿಯಾಗಿತ್ತು. ಕ್ರಿಸ್ಮಸ್ ರಜೆ ಹಿನ್ನೆಲೆ ತಂಡವೇ ಗೋಕರ್ಣಕ್ಕೆ ಹೊರಟಿತ್ತು. ಆ ಪೈಕಿ ಬಿಂದು ಮತ್ತು ಆಕೆಯ 5 ವರ್ಷದ ಮಗು ಗ್ರೇಯ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಾದ ಶಶಾಂಕ್ ಮತ್ತು ಸಂಧ್ಯಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಸೀಬರ್ಡ್ ಬಸ್ ದುರಂತ; ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಮಾನಸ ಐಡಿಯಲ್ಲಿ ನಾಲ್ಕು ಜನರಿಗೆ ಟಿಕೆಟ್ ಬುಕ್ ಆಗಿತ್ತು. ಬೆಂಗಳೂರು ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಾನಸ ಪಿಜಿಯಲ್ಲಿ ವಾಸವಿದ್ದರು. ತಮ್ಮ ಜೊತೆಗೆ ಇದ್ದ ನವ್ಯಾ, ಮಿಲನ ಸೇರಿ ಅಭಿಷೇಕ್ ಎಂಬವರ ಜೊತೆ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು. ಮಾನಸಾಗೆ ಮದುವೆಯೂ ನಿಗದಿಯಾಗಿದ್ದು, ಅದಕ್ಕಾಗಿ ಆಭರಣವನ್ನೂ ಕುಟುಂಬ ಖರೀದಿಸಿತ್ತು. ಆದ್ರೆ ವಿಧಿಯಾಟಕ್ಕೆ ಹಸೆಮಣೆ ಏರುವ ಮುನ್ನವೇ ಅವರು ಮಸಣ ಸೇರಿದ್ದಾರೆ. ರಶ್ಮಿ ಮತ್ತು ನವ್ಯಾ ಎಂಬವರು ಕೂಡ ಘಟನೆಯಲ್ಲಿ ಮೃತಪಟ್ಟಿರೋದು ದೃಢಪಟ್ಟಿದೆ.
ಇನ್ನು ಬಸ್ ಹೊತ್ತಿ ಉರಿಯುತ್ತಿದ್ದ ವೇಳೆ ಏನು ಮಾಡಬೇಕೆಂದು ತೋಚದೆ ಕೆಲವರು ಬಸ್ನಿಂದ ಹೊರಗಡೆ ಹಾರಿದ ಪರಿಣಾಮ ಅವರ ಪ್ರಾಣ ಉಳಿದಿದೆ. ಇಬ್ಬರು ಬಸ್ನಿಂದ ಜಿಗಿಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಕಿಂಗ್ ಮಾಡಿದ ಪ್ರಯಾಣಿಕರು ಮಾತ್ರವಲ್ಲದೆ ಮಾರ್ಗ ಮಧ್ಯೆ ಬಸ್ ಹತ್ತಿದ ಇಬ್ಬರು ಕೂಡ ಬಸ್ನಲ್ಲಿ ಇದ್ದರು ಎಂಬುದು ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:38 pm, Thu, 25 December 25




