ಹೆಣ್ಣು ಮಗು ಹುಟ್ಟಿದ್ದಕ್ಕೆ ಗಂಡ ಹೆಂಡತಿ ನಡುವೆ ಜಗಳ, ಮದುವೆಯಾಗಿ ಒಂದೇ ವರ್ಷಕ್ಕೆ ಠಾಣೆ ಮೆಟ್ಟಿಲೇರಿದ ವಿದ್ಯಾವಂತ ದಂಪತಿ

| Updated By: ಡಾ. ಭಾಸ್ಕರ ಹೆಗಡೆ

Updated on: Dec 07, 2021 | 2:50 PM

ಅವರಿಬ್ಬರೂ ವಿದ್ಯಾವಂತರು, ಇಬ್ಬರಿಗೂ ಮದುವೆ ಮಾಡಿದ್ರೆ ಜೀವನದಲ್ಲಿ ಚನ್ನಾಗಿ ಇರುತ್ತಾರೆ ಅಂತ ಅದ್ದೂರಿಯಾಗಿ ಮದುವೆ ಮಾಡಿ, ಕೈತುಂಬ ಮೈತುಂಬ ಹಣ ಚಿನ್ನಾಭರಣ ನೀಡಿ ವರದಕ್ಷಣೆ ಕೊಡಲಾಗಿತ್ತು. ಆದ್ರೆ ಕೈ ಹಿಡಿದ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೆ ತಡ, ರಾಂಗ್ ಆದ ಪತಿ ಹಾಗೂ ಆತನ ತಂದೆ ತಾಯಿ, ನಂಬಿ ಬಂದವಳಿಗೆ ಚಿತ್ರಹಿಂಸೆ ನೀಡಿ ವರದಕ್ಷಣೆಗೆ ಪೀಡಿಸಿದ ಘಟನೆ ನಡೆದಿದೆ.

ಹೆಣ್ಣು ಮಗು ಹುಟ್ಟಿದ್ದಕ್ಕೆ ಗಂಡ ಹೆಂಡತಿ ನಡುವೆ ಜಗಳ, ಮದುವೆಯಾಗಿ ಒಂದೇ ವರ್ಷಕ್ಕೆ ಠಾಣೆ ಮೆಟ್ಟಿಲೇರಿದ ವಿದ್ಯಾವಂತ ದಂಪತಿ
ಹೆಣ್ಣು ಮಗು ಹುಟ್ಟಿದಕ್ಕೆ ಗಂಡ ಹೆಂಡತಿ ನಡುವೆ ಜಗಳ, ಮದುವೆಯಾಗಿ ಒಂದೇ ವರ್ಷಕ್ಕೆ ಠಾಣೆ ಮೆಟ್ಟಿಲೇರಿದ ವಿದ್ಯಾವಂತ ದಂಪತಿ
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ನಿವಾಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಯ ಮಗಳು ಬಿಎಸ್ಸಿ ಅಗ್ರಿಕಲ್ಚರ್ ಪದವಿಧರೆ ಕರಿಷ್ಮಾಳನ್ನು ಗೌರಿಬಿದನೂರು ತಾಲೂಕಿನ ಕೆ.ಎಸ್.ಆರ್.ಟಿ.ಸಿ ನೌಕರನ ಮಗ ಕಲಂದರ್ ಖಾನ್ಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಮದುವೆಯಾಗಿ ಈಗ ತಾನೆ ಒಂದು ವರ್ಷ ತುಂಬಿದೆ. ಆಗಲೇ ಜೋಡಿಯ ಮಧ್ಯೆ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಗಂಡ ಹೆಂಡತಿ ಜಗಳಕ್ಕೆ ಕಾರಣವಾಯ್ತಾ ಮಗು
ಕರಿಷ್ಮಾಗೆ ಮದುವೆಯಾದ ಮೇಲೆ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಲ್ಯಾಬ್ ಸಹಾಯಕಿ ಸರ್ಕಾರಿ ಹುದ್ದೆ ಸಿಕ್ಕಿದೆ. ಕರಿಷ್ಮಾ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇದ್ದರೆ, ಗಂಡ ಪತ್ನಿಯ ಜೊತೆ ಹೋಗದೆ ತಂದೆ ತಾಯಿಯ ಜೊತೆ ಗೌರಿಬಿದನೂರಿನಲ್ಲಿ ಕಾಲ ಕಳೆಯುತ್ತಿದ್ದ. ಇದ್ರಿಂದ ಇಬ್ಬರ ಮಧ್ಯೆ ವೈಮನಸ್ಸು ಮೂಡಿದೆ. ಇನ್ನೂ ಎರಡು ತಿಂಗಳ ಹಿಂದೆ ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಗೆ ಮುನ್ನ ಮಗು ಜನಿಸಿದ ಕಾರಣ ತೂಕದಲ್ಲಿ ಹಾಗೂ ಆರೋಗ್ಯದಲ್ಲಿ ಮಗುವಿಗೆ ಏರು ಪೇರಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಕಲಂದರ್ ಹಾಗು ಆತನ ತಾಯಿ, ಹೆಣ್ಣು ಮಗು ಜನಿಸಿದ್ದಕ್ಕೆ 10 ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಮನೆಗೆ ಬಾ ಇಲ್ಲವೆಂದ್ರೆ ಬೇಡ ಅಂತ ಕಿರುಕುಳ ನೀಡುತ್ತಿದ್ದಾರಂತೆ. ಇದ್ರಿಂದ ನೊಂದ ಕರಿಷ್ಮಾ ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿ ಇದ್ದಾಳೆ.

ಆದ್ರೆ ಮಾತುಕತೆಗೆ ಅಂತ ಮಾವನ ಮನೆಗೆ ಬಂದ ಅಳಿಮಯ್ಯ ಹಾಗೂ ಆತನ ಸಂಬಂಧಿಗಳು, ಕರಿಷ್ಮಾ ಹಾಗೂ ಆಕೆಯ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದ್ರಿಂದ ಕರಿಷ್ಮಾ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಇತ್ತ ಕಲಂದರ್ ಮಾತ್ರ ಪತ್ನಿ ಆರೋಪವೆ ಸುಳ್ಳು, ಸಂಪ್ರದಾಯದಂತೆ ಬುರ್ಕಾ ಹಾಕಿಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಮಾಡ್ತಿದ್ದಾರೆ. ಮಾತುಕತೆಗೆ ಹೋದಾಗ ಪರಸ್ಪರ ತಳ್ಳಾಟ ನೂಕಾಟ ಗಲಾಟೆ ಆಗಿದ್ದು ನಿಜ, ಆದ್ರೆ ತನಗೆ ತನ್ನ ಪತ್ನಿ ಬೇಕು ಎಂದಿದ್ದಾನೆ.

ಕರಿಷ್ಮಾ ಮತ್ತು ಕಲಂದರ್ ಖಾನ್

ಇನ್ನೂ ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ, ಇಬ್ಬರು ವಿದ್ಯಾವಂತರು, ಅದರಲ್ಲಿ ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದೆ. ಎರಡು ತಿಂಗಳ ಮಗುವಿದೆ, ನೆಮ್ಮದಿಯಾಗಿ ಜೀವನ ಮಾಡೋ ಬದಲು ಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ ಅಂತ ಮಂಚೇನಹಳ್ಳಿ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ, ಸುಖವಾಗಿ ಸಂಸಾರ ನಡೆಸಿ ಅಂತ ತಿಳಿ ಹೇಳಿ ಪಂಚಾಯತಿ ಮಾಡಿ ಕಳುಹಿಸಿದ್ದಾರೆ.

ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ

ಇದನ್ನೂ ಓದಿ: Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​

Published On - 11:56 am, Tue, 7 December 21