K Sudhakar: ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯವಾಗಿ ನಿವೃತ್ತಿ; ಸಚಿವ ಕೆ ಸುಧಾಕರ್

|

Updated on: Apr 04, 2023 | 5:25 PM

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​​ 120 ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು.

K Sudhakar: ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯವಾಗಿ ನಿವೃತ್ತಿ; ಸಚಿವ ಕೆ ಸುಧಾಕರ್
ಕೆ ಸುಧಾಕರ್
Follow us on

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​​ (JDS) 120 ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr. K Sudhakar) ಹೇಳಿದರು. ರಾಜ್ಯದಲ್ಲಿ ಹಲವು ಬಾರಿ ಸಮ್ಮಿಶ್ರ ಸರ್ಕಾರಗಳ ಆಡಳಿತವನ್ನು ಕಂಡು ರೋಸಿಹೋಗಿರುವ ರಾಜ್ಯದ ಜನತೆ, ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

8 ಸ್ಥಾನಗಳಲ್ಲಿ ಕಮಲ ಅರಳಿಸುವ ಪಣ

ಹಳೇ ಮೈಸೂರು ಭಾಗದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 15 ವಿಧಾನಸಭಾ ಕ್ಷೇತ್ರಗಳಲ್ಲಿ ತಾವು ಜವಾಬ್ದಾರಿ ವಹಿಸಿದ್ದು, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಮತ್ತು ಈ ಭಾಗದ ಸಂಸದರೊಂದಿಗೆ ಸೇರಿ ಶ್ರಮಿಸುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ಈವರೆಗೂ ಶೂನ್ಯ ಸಾಧನೆಯಲ್ಲಿ ಬಿಜೆಪಿ ಇದ್ದು, ಈ ಬಾರಿ ಕನಿಷ್ಠ 5 ರಿಂದ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ

ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ವಿವಾದಾತ್ಮ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಖಾಲಿಯೂ ಆಗುವುದಿಲ್ಲ, ಖಾಲಿಯಾಗದ ಖುರ್ಚಿಗೆ ಟವೆಲ್ ಹಾಕಿಕೊಂಡು ಕೊತರೆ ಉಪಯೋಗವಿಲ್ಲ, ಅವರ ಆಸೆ ಈಡೇರುವುದೂ ಇಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಹೈಕಮಾಂಡ್ ಹೇಳುವುದನ್ನು ಇವರು ಒಪ್ಪಲ್ಲ ಅನ್ನುವುದಕ್ಕೆ ಇದು ನಿದರ್ಶನ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಬ್ಬರ ಮಧ್ಯೆ ಸಮನ್ವಯತೆ ಇಲ್ಲ, ಹಾಗಾಗಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಈ ಬಾರಿ ಬಹುಮತ ಪಡೆಯುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Karnataka Election; ದಾಖಲೆ ಇಲ್ಲದ ಲಕ್ಷ ಲಕ್ಷ ನಗದು, ಚಿನ್ನ ವಶ; ಇಂದು ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ಕಿತು? ಇಲ್ಲಿದೆ ನೋಡಿ

ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸುವ ಶಕ್ತಿ ಸಿಗುವುದಿಲ್ಲ, ಹಾಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದೆ. ಸಮ್ಮಿಶ್ರ ಸರ್ಕಾರ ಮತ್ತು ಕಾಂಗ್ರೆಸ್​​ಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇನ್ನೂ ಕಾಂಗ್ರೆಸ್ ಅಭ್ಯರ್ಥಿಯೇ ಅಂತಿಮವಾಗಿಲ್ಲ. ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ, ಚಿಕ್ಕಬಳ್ಳಾಪುರ ಮಾತ್ರವಲ್ಲ, ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಸಿಕ್ಕಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 90ರ ಗಡಿ ದಾಟುವುದಿಲ್ಲ ಎಂದು ಸಚಿವರು ಭವಿಷ್ಯ ನುಡಿದರು.

ತಮಗೆ ಬಿಜೆಪಿ ಪಕ್ಷ ಆಶ್ರಯ ಕೊಟ್ಟಿದೆ, ಸ್ಥಾನಮಾನ ನೀಡಿದೆ ಹಾಗಾಗಿ ತಾವು ಪಕ್ಷದ ಋಣ ತೀರಿಸಬೇಕು, ಮೂರೂ ಜಿಲ್ಲೆಗಳ ಒಟ್ಟು 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 8 ಸ್ಥಾನ ತಂದುಕೊಡಬೇಕು ಎಂದು ಎಲ್ಲರೂ ಶ್ರಮಿಸುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ