AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Polls: ಕಾಂಗ್ರೆಸ್ ಬಳಿ ದೊಡ್ಡ ಪಟ್ಟಿ ಇರುವುದರಿಂದಲೇ ಚೇರ್‌ಗಳಲ್ಲಿ ಹೊಡೆದಾಡುತ್ತಿರುವುದು: ಸಚಿವ ಸುಧಾಕರ್

ನನಗೆ ಗೊತ್ತಿರುವಂತೆ ಬಿಜೆಪಿಯಿಂದ ಯಾರೊಬ್ಬರೂ ಕಾಂಗ್ರೆಸ್​ಗೆ ಹೋಗುವುದಿಲ್ಲ. ಕಾಂಗ್ರೆಸ್‌ಗೆ ಹೋಗುವವರು ಯಾರೆಂದು ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಬಿಜೆಪಿ ಸಚಿವರು ಕಾಂಗ್ರೆಸ್ ಸೇರುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ನೀಡಿದ ಪ್ರತಿಕ್ರಿಯೆ ಇದಾಗಿದೆ.

Karnataka Polls: ಕಾಂಗ್ರೆಸ್ ಬಳಿ ದೊಡ್ಡ ಪಟ್ಟಿ ಇರುವುದರಿಂದಲೇ ಚೇರ್‌ಗಳಲ್ಲಿ ಹೊಡೆದಾಡುತ್ತಿರುವುದು: ಸಚಿವ ಸುಧಾಕರ್
ಡಾ ಕೆ ಸುಧಾಕರ್ ಮತ್ತು ಡಿಕೆ ಶಿವಕುಮಾರ್
Rakesh Nayak Manchi
|

Updated on:Apr 01, 2023 | 6:29 PM

Share

ಬೆಂಗಳೂರು: ನನಗೆ ಗೊತ್ತಿರುವಂತೆ ಬಿಜೆಪಿಯಿಂದ ಯಾರೊಬ್ಬರೂ ಕಾಂಗ್ರೆಸ್​ಗೆ ಹೋಗುವುದಿಲ್ಲ. ಕಾಂಗ್ರೆಸ್‌ಗೆ ಹೋಗುವವರು ಯಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನೇ ಕೇಳಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr. K. Sudhakar) ಹೇಳಿದ್ದಾರೆ. ಬಿಜೆಪಿ ಸಚಿವರು ಕಾಂಗ್ರೆಸ್ ಸೇರುತ್ತಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಪೂರ್ಣ ಬಹುಮತ ಬರುತ್ತದೆ, ಕಾಂಗ್ರೆಸ್‌ಗೆ ಯಾಕೆ ಹೋಗುತ್ತಾರೆ? ಕಾಂಗ್ರೆಸ್‌ನಲ್ಲಿ ಏನಾದರು ಆ್ಯಕ್ಟಿವಿಟಿ ಇದೆಯಾ? ಅವರ ಬಳಿ ದೊಡ್ಡ ಪಟ್ಟಿ ಇರುವುದರಿಂದಲೇ ಚೇರ್‌ಗಳಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎರಡನೇ ಪಟ್ಟಿ ಸಿದ್ದಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಒಬ್ಬರಿಗೊಬ್ಬರ ನಡುವೆ ಘರ್ಷಣೆ ನಡೆಯುತ್ತಿದೆ. ಎಷ್ಟು ಕುರ್ಚಿಗಳು ಮುರಿದಿವೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಶಿಗ್ಗಾಂವಿ ಕ್ಷೇತ್ರ ಬಿಟ್ಟು ಚಿಕ್ಕಬಳ್ಳಾಪುರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಕ್ಷೇತ್ರ ಸಂಕಟ ಅಂತಾ ಬೊಮ್ಮಾಯಿರವರು ಯಾರಿಗಾದರೂ ಹೇಳಿದ್ದಾರಾ? ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಬೊಮ್ಮಾಯಿರವರು ಎಲ್ಲೂ ಸೋತಿಲ್ಲ, ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೇ ಗೆಲ್ಲುತ್ತಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ. ಇವರ ವಿರುದ್ಧ ಕಣಕ್ಕಿಳಿದರೆ ದೊಡ್ಡ ಅಂತರದಲ್ಲಿ ವಿನಯ್ ಕುಲಕರ್ಣಿ ಸೋಲುವುದು ಖಚಿತ ಎಂದರು.

ಇದನ್ನೂ ಓದಿ: ವಿನಯ್ ಕುಲಕರ್ಣಿ ಮೂಲಕ ಶಿಗ್ಗಾವಿಯಲ್ಲಿ ಬೊಮ್ಮಾಯಿ ಹಣೆಯಲು ಮುಂದಾದ ಕಾಂಗ್ರೆಸ್​ಗೆ ಒಳ ಏಟಿನ ಭೀತಿ

ಶಿಗ್ಗಾಂವಿಯಲ್ಲಿ ಪಂಚಮಸಾಲಿ ಮತಗಳು ಅಧಿವಾಗಿರುವುದರಿಂದ ವಿನಯ್​ ಕುಲಕರ್ಣಿ ಮೂಲಕ ಸಿಎಂ ಬೊಮ್ಮಾಯಿ ಹಣೆಯಲು ಕಾಂಗ್ರೆಸ್ ಮುಂದಾಗಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಒಪ್ಪಿಗೆ ಸೂಚಿಸಿದೆ. ಎಐಸಿಸಿ ಕಚೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕುಲಕರ್ಣಿ ಅವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯೂ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಪಂಚಮಸಾಲಿ ಸಮಾಜದ 65 ಸಾವಿರ ಮತಗಳಿದ್ದರೆ, 50 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ ಈ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಇನ್ನು ವಿನಯ್ ಕುಲಕರ್ಣಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತರು ಲಾಭ-ನಷ್ಟದ ಲೆಕ್ಕಚಾರಗಳನ್ನು ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರನ್ನೇ ಕೇಳಿ: ಸುಧಾಕರ್

ಈಗಾಗಲೇ ಸಿದ್ದರಾಮಯ್ಯ ಅವರಿಗೆ ವರುಣಾ ಟಿಕೆಟ್ ಘೋಷಣೆಯಾಗಿದೆ. ಅದಾಗ್ಯೂ, ಅವರು ಕೋಲಾರ ಕ್ಷೇತ್ರದಿಂದಲೂ ಸ್ಪರ್ಥಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಅವರನ್ನೇ ಕೇಳಿ. ವರುಣಾ ಕ್ಷೇತ್ರದ ಕಡೆ ಹೋಗಿದ್ದಾರೆ, ಪಾಪ ಬಹಳ ಸಮಯ ಆಗಿದೆ ಎಂದರು.

ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sat, 1 April 23