AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಕುಲಕರ್ಣಿ ಮೂಲಕ ಶಿಗ್ಗಾವಿಯಲ್ಲಿ ಬೊಮ್ಮಾಯಿ ಹಣೆಯಲು ಮುಂದಾದ ಕಾಂಗ್ರೆಸ್​ಗೆ ಒಳ ಏಟಿನ ಭೀತಿ

ವಿನಯ್ ಕುಲಕರ್ಣಿ ಮೂಲಕ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣೆಯಲು ಮುಂದಾದ ಕಾಂಗ್ರೆಸ್​ಗೆ ಒಳ ಏಟಿನ ಭೀತಿ ಶುರುವಾಗಿದೆ.

ವಿನಯ್ ಕುಲಕರ್ಣಿ ಮೂಲಕ ಶಿಗ್ಗಾವಿಯಲ್ಲಿ ಬೊಮ್ಮಾಯಿ ಹಣೆಯಲು ಮುಂದಾದ ಕಾಂಗ್ರೆಸ್​ಗೆ ಒಳ ಏಟಿನ ಭೀತಿ
ರಮೇಶ್ ಬಿ. ಜವಳಗೇರಾ
|

Updated on: Mar 31, 2023 | 11:34 AM

Share

ಹಾವೇರಿ: ಧಾರವಾಡ ಮತ್ತು ಶಿಗ್ಗಾಂವಿ ವಿಧಾನಸಭಾ(Shiggaon Assembly Election 2o023) ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ (Congress) ತನ್ನ ಮೊದಲ ಪಟ್ಟಿಯಲ್ಲಿ ಘೋಷಿಸದೆ ತಡೆಹಿಡಿದೆ. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ)Basavaraj Bommai) ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ(Vinay Kulkarni) ಕಣಕ್ಕಿಳಿಯಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ. ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ್ ಹತ್ಯೆ ಪ್ರಕರಣದಲ್ಲಿ ಕುಲಕರ್ಣಿ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಈ ಹಿಂದೆ ಎರಡು ಬಾರಿ ಗೆದ್ದಿರುವ ಕುಲಕರ್ಣಿ ಧಾರವಾಡದಿಂದ ಸ್ಪರ್ಧಿಸುವ ಬಗ್ಗೆ ಗೊಂದಲವಿದೆ. ಹೀಗಾಗಿ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್​ ಮುಂದಾಗಿದೆ. ಪಂಚಮಸಾಲಿ ಮತದಾರರು ಹೆಚ್ಚಿರುವ ನಿಟ್ಟಿನಲ್ಲಿ ವಿನಯ್ ಕುಲಕರ್ಣಿ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಅಲ್ಲದೇ ಶಿಗ್ಗಾಂವಿ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ಮೊನ್ನೇ ಅಷ್ಟೇ ವಿನಯ್ ಕುಲರ್ಣಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಅಂತಿಮವಾಗಿ ಖಾದ್ರಿ ಕಣದಿಂದ ಹಿಂದೆ ಸರಿದು ವಿನಯ್ ಕುಲಕರ್ಣಿಗೆ ಜೈ ಎಂದಿದ್ದಾರೆ. ಇದರ ಬೆನ್ನಲ್ಲೇ ಇನ್ನುಳಿದ ಟಿಕೆಟ್​ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ. ಇದರಿಂದ ಸಿಎಂ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಯುವ ಮುನ್ನವೇ ವಿನಯ್ ಕುಲಕರ್ಣಿಗೆ ಒಳ ಏಟಿನ ಭೀತಿ ಶುರುವಾಗಿದೆ.

ಇದನ್ನೂ ಓದಿ: ವಿನಯ್ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆಗುತ್ತಾರೆ: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ

ಹೌದು…ವಿನಯ್ ಕುಲಕರ್ಣಿಗೆ ಟಿಕೇಟ್ ಫೈನಲ್ ಸುದ್ದಿ ಕಿವಿಗೆ ಬಡಿಯುತ್ತಲೇ 13 ಜನ ಟಿಕೆಟ್​ ಆಕಾಂಕ್ಷಿಗಳು ಮುನಿಸಿಕೊಂಡಿದ್ದಾರೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಅಷ್ಟೇ ಪಕ್ಷಕ್ಕಾಗಿ ದುಡಿದಿಲ್ಲ. ಖಾದ್ರಿ ವಿಶ್ವಾಸಕ್ಕೆ ತೆಗೆದುಕೊಂಡ ಕೆಪಿಸಿಸಿ ಮುಖಂಡರಿಗೆ ನಾವೆಲ್ಲಾ ಬೇಕಿಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ವಿನಯ್​ ಕುಲಕರ್ಣಿ ಅವರಿಗೆ ಕೈ ಟಿಕೆಟ್‌ ನೀಡಿದರೆ ಮುಸ್ಲಿಂ ಮತಗಳು ಕೈತಪ್ಪುವ ಆತಂಕ ಕೂಡ ಕಾಂಗ್ರೆಸ್​ ನಾಯಕರಲ್ಲಿದೆ. ಕೈ ಟಿಕೆಟ್‌ ಸಿಗದಿದ್ದರೆ ಜೆಡಿಎಸ್‌ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆಯೂ ಅವರಿಗಿದ್ದು, ಇದು ಕಾಂಗ್ರೆಸ್ಸಿಗೇ ಹೊಡೆತ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಒಳಜಗಳ ಬೊಮ್ಮಾಯಿಗೆ ವರವಾಗಿ ಪರಿಣಮಿಸಲಿದೆ.

ಸೋಮಣ್ಣ ಬೇವಿನಮರದ, ಎಸ್ ಎಸ್ ಶಿವಳ್ಳಿ, ಸಂಜೀವ್ ನೀರಲಗಿ, ಶಶಿಧರ ಯಲಿಗಾರ, ಡಾ.ಫಕ್ಕೀರಗೌಡ್ರ ಪಾಟೀಲ, ಯಾಸೀರಖಾನ್‌ ಪಠಾಣ, ಎಸ್‌.ಬಿ.ಪಾಟೀಲ, ನೂರಹ್ಮದ ಮಾಳಗಿ, ಎಂ.ಜಾವೀದ್‌, ರಾಜೇಶ್ವರಿ ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ ಅವರ ಪುತ್ರ ಶಾಕೀರ ಸನದಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇದೀಗ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ತಟಸ್ಥರಾಗಿದ್ದಾರೆ. ಖಾದ್ರಿ ಅಷ್ಟೇ ಇಲ್ಲಿ ಲೀಡರ್ ಅಲ್ಲ. ಇಷ್ಟು ದಿನ ಪಕ್ಷಕ್ಕಾಗಿ ನಾವೂ ದುಡಿದಿದ್ದೇವೆ. ಎಂದು ಟಿಕೆಟ್​ ಆಕಾಂಕ್ಷಿಗಳ ಮಾತು. ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳದಿದ್ದರೂ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೇ ತಟಸ್ಥರಾಗಿ ಉಳಿದುಕೊಂಡು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತ-ಪಂಚಮಸಾಲಿ ಮತ್ತು ಮುಸ್ಲಿಂ ಮತಗಳು ಸಾಕಷ್ಟು ಇರುವುದರಿಂದ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಕೂಡ ಉತ್ಸುಕವಾಗಿದೆ. ಬೊಮ್ಮಾಯಿ ಸಾದರ್ ಪಂಗಡಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಜಾತಿ ಲೆಕ್ಕಾಚಾರಗಳ ಮೇಲೆ ಬೊಮ್ಮಾಯಿ ಅವರನ್ನು ಮಣಿಸಲು ಕುಲಕರ್ಣಿ ಸೂಕ್ತ ಎಂದು ಕಾಂಗ್ರೆಸ್ ಭಾವಿಸಿದೆ. ಆದ್ರೆ, ಕ್ಷೇತ್ರದಲ್ಲಿ ಒಳಬೇಗುದಿ ಮತ್ತೆ ಬಹಿರಂಗವಾಗಿದ್ದು, ಇದು ಮುಂದೆ ಯಾವ ಮಟ್ಟಕ್ಕೆ ಹೋಗಲಿದೆ ಎನ್ನುವುದು ಕಾದುನೋಡಬೇಕಿದೆ.

ಇನ್ನಷ್ಟು  ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದಿನ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ