ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತ್ತು ಆದೇಶ ಹಿಂಪಡೆದ ಬಿಜೆಪಿ
ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಅಮಾನತ್ತು ಆದೇಶವನ್ನು ಕರ್ನಾಟಕ ಬಿಜೆಪಿ ಹಿಂಪಡೆದುಕೊಂಡಿದೆ. ಈ ಮೂಲಕ ಈ ಚುನಾವಣೆ ಹೊತ್ತಿನಲ್ಲಿ ಪ್ರಭಾವಿ ನಾಯಕ ಶ್ರೀನಿವಾಸ್ಗೆ ಮಣೆ ಹಾಕಿದೆ.
ಬೆಂಗಳೂರು/ಚಿತ್ರದುರ್ಗ: ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಗೆಲುವು ಸಾಧಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ(BJP) ಇದಕ್ಕೆ ಅನುಕೂಲಕರವಾದ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ಮುಖಂಡ, ಗೊಲ್ಲ ಸಮುದಾಯದ ಪ್ರಮುಖ ನಾಯಕ ಹಾಗೂ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ(hiriyuru BJP mla poornima) ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ. ಉಚ್ಚಾಟನೆ ವಾಪಸ್ ಪಡೆಯಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅದ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷದ ಬಗ್ಗೆ ತಾವು ತೋರಿದ ಬದ್ದತೆ,ನಡವಳಿಕೆ ಹಾಗೂ ಉಚ್ಚಾಟನೆ ಆದೇಶದ ಕುರಿತು ತಾವು ನೀಡಿದ ಉತ್ತರ ಗಮನಿಸಿ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ ಎಂದು ಪಕ್ಷದ ಶಿಸ್ತು ಸಮಿತಿ ತನ್ನ ಆದೇಶದಲ್ಲಿ ತಿಳಿಸಿದೆ. ಒಳ ಮೀಸಲಾತಿ ಗೊಂದಲ ಸೇರಿದಂತೆ ಹಲವು ಕಾರಣದಿಂದ ಹಿಂದುಳಿದ ಸಮುದಾಯ ಬಿಜೆಪಿ ಪರವಾಗಿಲ್ಲ ಎಂಬ ವರದಿಗಳಿಂದ ಬೆಚ್ಚಿರುವ ಹೈಕಮಾಂಡ್ ಇದೀಗ ಈ ಸಮುದಾಯಗಳನ್ನು ಓಲೈಸತೊಡಗಿದೆ.ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯದ ಮುಖಂಡ ಹಾಗೂ ಕಾಡುಗೊಲ್ಲ ಸಮುದಾಯದ ಪ್ರಭಾವಿ ನಾಯಕ ಶ್ರೀನಿವಾಸ್ಗೆ ಮಣೆ ಹಾಕಿದೆ.
ಇದನ್ನೂ ಓದಿ: ಶಾಸಕಿ ಪೂರ್ಣಿಮಾ ಬೆಂಬಲಿಗರಿಂದ ಪ್ರತಿಭಟನೆ; ಮಂತ್ರಿ ಸ್ಥಾನ ನೀಡದಕ್ಕೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ
ಕಳೆದ ಎರಡೂವರೆ ವರ್ಷಗಳ ಹಿಂದೆ ಪಕ್ಷದ ಸೂಚನೆ ಕಡೆಗಣಿಸಿ, ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಡಿ.ಟಿ.ಶ್ರೀನಿವಾಸ್ ಅವರನ್ನು ಅಕ್ಟೋಬರ್ 23, 2020ರಂದು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿತ್ತು. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀನಿವಾಸ್ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ತಿಳಿಸಿದ್ದರೂ ಪಕ್ಷದ ಸೂಚನೆ ಕಡೆಗಣಿಸಿ, ಮುಜುಗರಕ್ಕೆ ಕಾರಣರಾಗಿದ್ದು, ಆದ್ದರಿಂದ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿತ್ತು. ಆದ್ರೆ, ಇದೀಗ ದೇ ಶಿಸ್ತು ಸಮಿತಿ ತನ್ನ ಆದೇಶ ವಾಪಸ್ ಪಡೆದಿದೆ.
ಅಸಮಾಧಾನಪಡಿಸಲು ಬಿಜೆಪಿ ಕಸರತ್ತು
ಹೌದು.ಹಿಂದುಳಿದ ವರ್ಗದ ಏಕೈಕ ಮಹಿಳಾ ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಲಿಲ್ಲ ಎನ್ನುವುದು ಕಾಡುಗೊಲ್ಲ ಸಮುದಾಯದ ಬಹುದೊಡ್ಡ ಅಸಮಾಧಾನಕ್ಕೆ ಕಾರಣವಾಗಿತ್ತು. ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಪೂರ್ಣಿಮಾ ಅವರು ನಾಯಕರ ಮೇಲೆ ಮುನಿಸಿಕೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನು ಅರಿತ ಕಾಂಗ್ರೆಸ್ ಪೂರ್ಣಿಮಾ ಅವರನ್ನು ಸೆಳೆಯಲು ಕಸರತ್ತು ನಡೆಸಿತ್ತು. ಇದರಿಂದ ಎಚ್ಚೆತ್ತ ಬಿಜೆಪಿ ಪೂರ್ಣಿಮಾ ಅವರನ್ನು ಮನವೊಲಿಸಲು ಅವರ ಪತಿಯ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಈ ಮೂಲಕ ಪೂರ್ಣಿಮಾ ಅವರನ್ನು ಅಸಮಾಧಾನಪಡಿಸಲು ಮುಂದಾಗಿದೆ.
ಪುರ್ಣಿಮಾ ಅವರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಆದ್ರೆ, ಅದು ಸಕ್ಸಸ್ ಆಗದಿದ್ದರಿಂದ ಅಂತಿಮವಾಗಿ ಹಿರಿಯೂರ ಕ್ಷೇತ್ರಕ್ಕೆ ಮಾಜಿ ಸಚಿವ ಡಿ ಸುಧಾಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:37 am, Fri, 31 March 23