ಶಾಸಕಿ ಪೂರ್ಣಿಮಾ ಬೆಂಬಲಿಗರಿಂದ ಪ್ರತಿಭಟನೆ; ಮಂತ್ರಿ ಸ್ಥಾನ ನೀಡದಕ್ಕೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ

ಶಾಸಕಿ ಪೂರ್ಣಿಮಾ ಬೆಂಬಲಿಗರಿಂದ ಪ್ರತಿಭಟನೆ; ಮಂತ್ರಿ ಸ್ಥಾನ ನೀಡದಕ್ಕೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ
ಶಾಸಕಿ ಪೂರ್ಣಿಮಾ ಬೆಂಬಲಿಗರಿಂದ ಪ್ರತಿಭಟನೆ

ಶಾಸಕಿ ಪೂರ್ಣಿಮಾ ಬೆಂಬಲಿಗರ ಪ್ರತಿಭಟನೆಯಲ್ಲಿ ವಿವಿಧ ಗ್ರಾಮ ಪಂಚಾಯತಿ ಸದಸ್ಯರು, ಕೆಲ ಬಿಜೆಪಿ ಮುಖಂಡರು ಸೇರಿದಂತೆ ಧರ್ಮಪುರ ಹೋಬಳಿಯ ವಿವಿಧ ಗ್ರಾಮದ ಜನರು ಭಾಗಿಯಾಗಿದ್ದಾರೆ.

TV9kannada Web Team

| Edited By: preethi shettigar

Aug 06, 2021 | 12:18 PM

ಚಿತ್ರದುರ್ಗ:  ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ಗೆ ಸಚಿವ ಸ್ಥಾನ ಕೈತಪ್ಪಿದ್ದು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕಿ ಪೂರ್ಣಿಮಾ ಬೆಂಬಲಿಗರು ಪ್ರತಿಭಟನೆ ಮೂಲಕ ಸರ್ಕಾರಕ್ಕೆ‌ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಕಳೆದ ಬುಧವಾರ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪೂರ್ಣಿಮಾ ಬೆಂಬಲಿಗರು ಧರಣಿ ನಡೆಸಿದ್ದರು. ನಿನ್ನೆ ಲಕ್ಷ್ಮಮ್ಮ ಸಭಾಂಗಣದಲ್ಲಿ ಸಭೆ ನಡೆಸಿ ನಿರಂತರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಅದಂತೆ ಇಂದು ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಿಂದ ಹಿರಿಯೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಬೆಳಗ್ಗೆಯಿಂದಲೇ ಶಾಸಕಿ ಪೂರ್ಣಿಮಾ ಬೆಂಬಲಿಗರು ಪಾದಯಾತ್ರೆ ಆರಂಭಿಸಿದ್ದಾರೆ. ಧರ್ಮಪುರದಿಂದ ಸುಮಾರು 30 ಕಿ.ಮೀ ದೂರದ ಹಿರಿಯೂರಿಗೆ ಪಾದಯಾತ್ರೆ ನಡೆಸುತ್ತಿದ್ದು, ಪ್ರತಿಭಟನಾಕಾರರು ಧರ್ಮಪುರ ಬಳಿ ಟೈರಿಗೆ ಬೆಂಕಿಯಿಟ್ಟು ಬಸವಾಜ್​ ಬೊಮ್ಮಾಯಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಜತೆಗೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಮಹಿಳಾ ಕೋಟಾದಡಿ ಶಾಸಕಿ ಪೂರ್ಣಿಮಾಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಪೂರ್ಣಿಮಾಗೆ ಮಂತ್ರಿಗಿರಿಯ ಭರವಸೆ ನೀಡಿದ್ದ ಸಿಎಂ ಬಿಮ್ಮಾಯಿ ಮತ್ತು ನಾಯಕರು ಕೊನೆ ಕ್ಷಣದಲ್ಲಿ ಒತ್ತಡಕ್ಕೆ ಮಣಿದು ಬದಲಾಯಿಸಿದ್ದಾರೆ. ಭ್ರಷ್ಟಾಚಾರದ ಆರೋಪ‌ ಹೊತ್ತಿರುವ ಶಶಿಕಲಾ‌ ಜೊಲ್ಲೆಗೆ ಮತ್ತೆ ಮಣೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸಕಿ ಪೂರ್ಣಿಮಾ ಬೆಂಬಲಿಗರ ಪ್ರತಿಭಟನೆಯಲ್ಲಿ ವಿವಿಧ ಗ್ರಾಮ ಪಂಚಾಯತಿ ಸದಸ್ಯರು, ಕೆಲ ಬಿಜೆಪಿ ಮುಖಂಡರು ಸೇರಿದಂತೆ ಧರ್ಮಪುರ ಹೋಬಳಿಯ ವಿವಿಧ ಗ್ರಾಮದ ಜನರು ಭಾಗಿಯಾಗಿದ್ದಾರೆ. ಪಾದಯಾತ್ರೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿವೈಎಸ್​ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ ಪಾದಾಯಾತ್ರೆ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಶಾಂತಿ ಪಾಲನೆಗೆ ಸೂಚಿಸಿದ್ದಾರೆ.

ಗೊಲ್ಲ ಸಮುದಾಯದ ಏಕೈಕ ಶಾಸಕಿ, ಹಿಂದುಳಿದ ಸಮುದಾಯಗಳ ಆಶಾಕಿರಣವಾದ ಪೂರ್ಣಿಮಾ ಶ್ರೀನಿವಾಸ್​ಗೆ ಮಂತ್ರಿಗಿರಿಯ ಆಸೆ ತೋರಿಸಿ ವಂಚಿಸಲಾಗಿದೆ. ಮಂತ್ರಿಗಿರಿ ನೀಡುವವರೆಗೆ ನಾವು ವಿರಮಿಸುವುದಿಲ್ಲ. ಹಿರಿಯೂರು ಬಂದ್ ಸೇರಿದಂತೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಧರ್ಮಪುರ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್ ಪೋಸ್ಟ್‌ಗೆ ಶಾಸಕಿ ಪೂರ್ಣಿಮಾ ಸ್ಪಷ್ಟನೆ, ಹಾಗಾದ್ರೆ ಬಿಜೆಪಿ ಬಗ್ಗೆ ಅವರು ಹೇಳಿದ್ದೇನು?

ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು

Follow us on

Related Stories

Most Read Stories

Click on your DTH Provider to Add TV9 Kannada