ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’, ಸಂಕಷ್ಟದಲ್ಲಿ ರೈತರು

ಇತ್ತೀಚೆಗೆ ಭಾರೀ ಏರಿಕೆ ಕಂಡಿದ್ದ ಟೊಮ್ಯಾಟೊ ಬೆಲೆ ಮತ್ತೆ ಕುಸಿತ ಕಂಡಿದೆ. ಕರ್ನಾಟಕದ ರೈತರು, ವಿಶೇಷವಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಗಣೆ, ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ 50 ಸಾವಿರಕ್ಕೂ ಹೆಚ್ಚು ವೆಚ್ಚವಾಗಿದ್ದರೂ, ಮಾರುಕಟ್ಟೆಯಲ್ಲಿ ಟೊಮ್ಯಾಟೊ ಧಾರಣೆ ಕುಸಿದಿದೆ. ಅಂತರರಾಜ್ಯಗಳಿಂದ ಹೆಚ್ಚಿದ ಪೂರೈಕೆ ಮತ್ತು ಏಕಕಾಲಿಕ ಫಸಲು ಇದಕ್ಕೆ ಪ್ರಮುಖ ಕಾರಣ. ಗ್ರಾಹಕರಿಗೆ ಖುಷಿ ತಂದರೂ, ರೈತರು ಕಂಗಾಲಾಗಿದ್ದಾರೆ.

ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ಕೆಂಪು ರಾಣಿ, ಸಂಕಷ್ಟದಲ್ಲಿ ರೈತರು
ಸಾಂದರ್ಭಿಕ ಚಿತ್ರ
Edited By:

Updated on: Jan 08, 2026 | 8:14 AM

ಚಿಕ್ಕಬಳ್ಳಾಪುರ, ಜ.8: ಟೊಮೇಟೊ (Tomato price) ಮತ್ತೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭಾರೀ ಏರಿಕೆ ಕಂಡಿದ್ದ ಟೊಮೇಟೊ ರೈತರ ಮುಖದಲ್ಲಿ ಮಂದಹಾಸ ಬೀರಿತ್ತು. ಆದರೆ ಇದೀಗ ಮತ್ತೆ ರೈತರಿಗೆ ಸಂಕಷ್ಟ ತಂದಿದೆ. ಆಪಲ್ ಬೆಲೆ ಮೀರಿಸಿದ್ದ ಟೊಮೇಟೊ ಮತ್ತೆ ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಆದರೆ ರೈತರಿಗೆ ಸಂಕಷ್ಟ ಎದುರಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಅವಳಿ ಜಿಲ್ಲೆಗಳ ರೈತರು ಕೊರೆಯುವ ಚಳಿಯಲ್ಲೂ ಯಥೇಚ್ಛವಾಗಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಇದರಿಂದ ಒಳ್ಳೆಯ ಫಸಲು ಕೂಡ ಪಡೆದಿದ್ದರು. ಆದರೆ ಇದೀಗ ಚಿಕ್ಕಬಳ್ಳಾಪುರದ ಎ.ಪಿ.ಎಂ.ಸಿ ಟೊಮೇಟೊ ಮಾರುಕಟ್ಟೆಯಲ್ಲಿ 15 ಕೆ.ಜಿ ಕ್ರೇಟ್ 250 ರೂಪಾಯಿಯಿಂದ ಆರು ನೂರು ರೂಪಾಯಿಗೆ ಮಾತ್ರ ಮಾರಾಟವಾಗಿದೆ.

ಇನ್ನೂ ಒಂದು ಎಕರೆ ಟೊಮೇಟೊ ಬೆಳೆಯಲು 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಆಗುತ್ತೆ. ಟೊಮೇಟೊ ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಾಟ, ಉಳುಮೆ ಅಂತ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದ್ರೆ ಈಗ ಮತ್ತೆ ಟೊಮ್ಯಾಟೊ ಹಣ್ಣಿಗೆ ಬೆಲೆ ಕಡಿಮೆಯಾಗಿದೆ. ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಟೊಮ್ಯಾಟೊ ಬೆಳೆ ಆರಂಭ ಮಾಡಿದ್ದೆ ಚಿಕ್ಕಬಳ್ಳಾಪುರದಲ್ಲಿ ಟೊಮೇಟೊ ಹಣ್ಣಿನ ಬೆಲೆ ಕುಸಿತವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬೆಂಗಳೂರು ಸೇರಿದಂತೆ ಹಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ, ವಾಹನ ಸವಾರರಿಗೆ ಎಚ್ಚರಿಕೆ

ಕಷ್ಟ ಪಟ್ಟು ಬೆಳೆದ ಟೊಮೇಟೊ ಗೆ ಬೆಲೆ ಕಡಿಮೆಯಾದ ಕಾರಣ, ಬೇಸರ ವ್ಯಕ್ತಪಡಿಸಿರುವ ರೈತರ, ತೋಟಗಳ ಕಡೆ ಗಮನ ಕಡಿಮೆ ಮಾಡಿದ್ದಾರೆ. ಕಳೆದ ವಾರವಷ್ಟೇ 15 ಕೆಜಿಯ ಒಂದು ಬಾಕ್ಸ್‌ಗೆ 600 ರೂ. – 800 ರೂ. ರಷ್ಟಿದ್ದ ಬೆಲೆ, ಈಗ ಕೆಲವು ಕಡೆ 150 ರೂ. – 250 ರೂ. ಕ್ಕೆ ಇಳಿದಿದೆ. ರೈತರಿಗೆ ಸಿಗುವ ಬೆಲೆ ಕಡಿಮೆ ಇದ್ದರೂ, ಬೆಂಗಳೂರಿನಂತಹ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇನ್ನೂ ಕೆಜಿಗೆ 30 ರೂ. – 50 ರೂ. ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಕೆಲವು ಮಂಡಿಗಳಲ್ಲಿ ಕೆಜಿಗೆ ಕೇವಲ 10 ರೂ. ರಿಂದ 15 ರೂ. ರವರೆಗೆ ದರ ಸಿಗುತ್ತಿದೆ. ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಇಳಿಕೆಗೆ ಮುಖ್ಯ ಕಾರಣ. ರಾಜ್ಯದಾದ್ಯಂತ ಏಕಕಾಲಕ್ಕೆ ಟೊಮೆಟೊ ಫಸಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ