ಚಿಕ್ಕಬಳ್ಳಾಪುರ ಸೆ.09: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನೂತನ ಮೆಡಿಕಲ್ ಕಾಲೇಜು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ (Leopard) ಸ್ಥಳದಲ್ಲೇ ಮೃತಪಟ್ಟಿದೆ. ಸುಮಾರು ಎರಡು ವರ್ಷದ ಚಿರತೆ ಇಂದು (ಸೆ.09) ಮುಂಜಾನೆ ಎರಡು ಗಂಟೆ ಸಮಯದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿ ಸಾವಿಗೀಡಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿರತೆಗಳು ಇತ್ತೀಚೆಗೆ ದೊಡ್ಡಪೈಯಲಗುರ್ಕಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದವು.
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಅರೇನೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ತೆಂಗಿನ ಮರ, ಕಾಫಿ ಗಿಡ, ಅಡಕೆ, ಬಾಳೆ ಬೆಳೆ ನಾಶವಾಗಿದೆ. ಕಾಡಾನೆಗಳು ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಬೀಡುಬಿಟ್ಟಿವೆ.
ಇನ್ನು ಸೆ.3ರಂದು ಕಾಡಾನೆ ದಾಳಿಯಿಂದ ಕಿನ್ನಿ ಎಂಬ ಕಾರ್ಮಿಕ ಮೃತಪಟ್ಟಿದ್ದರು. ಈ ಕಾಡಾನೆಗಳ ಹಿಂಡನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು: ಕಾವೇರಿಪುರ ಮೂಡಲಹುಂಡಿ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ, ಎರಡು ಮೇಕೆಗಳ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು
ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಒಂಟಿ ಸಲಗ ಮನೆಯ ಕಾಂಪೌಂಡ್ ಒಳಗೆ ನುಗ್ಗಿದೆ. ಕಾಡಾನೆ ಕಂಡು ಜನರು ಗಾಬರಿಯಿಂದ ಮನೆಯೊಳಗೆ ಓಡಿ ಹೋದರು.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿಸಲಗಕ್ಕೆ ಸೈರನ್ ಹಾಕಿ ಎಸ್ಕಾರ್ಟ್ ನೀಡಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಸಂಚರಿಸುತ್ತಿದ್ದು ಎಚ್ಚರಿಕೆಯಿಂದ ಓಡಾಡುವಂತೆ ಸ್ಥಳೀಯರಿಗೆ ಸೂಚನೆ ನೀಡಿದರು. ಗ್ರಾಮಸ್ಥರು ಕಾಡಾನೆ ಹಾವಳಿಯಿಂದ ಕಾರ್ಮಿಕರು ಆತಂಕಗೊಂಡಿದ್ದು, ಕಾಫಿ ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ