ಚಿಕ್ಕಬಳ್ಳಾಪುರ: ಬೇಜವಾಬ್ದಾರಿ ಸರ್ಕಾರಿ ವೈದ್ಯರಿಗೆ ಸಚಿವ ಸುಧಾಕರ್ ವಾರ್ನಿಂಗ್; ವೈದ್ಯರ ಗುಂಪುಗಾರಿಕೆ ವಿರುದ್ದ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2024 | 6:39 PM

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಿದ್ದೇ ತಡ ಅಲ್ಲಿಯ ವೈದ್ಯರಲ್ಲಿ ಎರಡು ತಂಡಗಳಾಗಿ, ನಾನಾ-ನೀನಾ ಎನ್ನುವ ಪ್ರತಿಷ್ಟೆಯಲ್ಲಿ ಬಡ ರೊಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಎಚ್ಚೆತ್ತ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್​ ಅಲ್ಲಿಯ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನ ತರಾಟೆಗೆ ತೆಗೆದುಕೊಂಡರು.

ಚಿಕ್ಕಬಳ್ಳಾಪುರ: ಬೇಜವಾಬ್ದಾರಿ ಸರ್ಕಾರಿ ವೈದ್ಯರಿಗೆ ಸಚಿವ ಸುಧಾಕರ್ ವಾರ್ನಿಂಗ್; ವೈದ್ಯರ ಗುಂಪುಗಾರಿಕೆ ವಿರುದ್ದ ಆಕ್ರೋಶ
ಎಂಸಿ ಸುಧಾಕರ್​
Follow us on

ಚಿಕ್ಕಬಳ್ಳಾಪುರ, ಫೆ.02: ಜಿಲ್ಲಾಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿದ್ದ ಜಿಲ್ಲಾಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಇದರಿಂದ ಎರಡು ಇಲಾಖೆಯ ವೈದ್ಯರು ಸಿಬ್ಬಂದಿ ಹಾಗೂ ಅಧಿಕಾರಿಗಳ ಮಧ್ಯೆ ಇನ್ನೂ ಹೊಂದಾಣಿಕೆಯಾಗುತ್ತಿಲ್ಲ. ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ರೀತಿಯಲ್ಲಿ ಇಲ್ಲಿರುವ ವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಗುಂಪುಗಾರಿಕೆ ಮಾಡಿಕೊಂಡು ಸಮರ್ಪಕವಾಗಿ ಆಡಳಿತ ನಡೆಸದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಸೂಕ್ತ ಚಿಕಿತ್ಸೆ ನೀಡಲು ನಿರ್ಲಕ್ಷ ತೋರಿದ್ದಾರೆ ಎನ್ನುವ ಆರೋಪಗಳು ಹೆಚ್ಚಾಗಿವೆ. ಇದರಿಂದ ಇಂದು ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ (M.C Sudhakar)  ಆಸ್ಪತ್ರೆಗೆ ದಿಢೀರ್ ಬೇಟಿ ನೀಡಿ ಕೂಲಂಕುಶವಾಗಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಸಚಿವರು ‘ಗುಂಪುಗಾರಿಕೆ ಬಿಟ್ಟು ಕರ್ತವ್ಯ ಬದ್ದತೆ ತೋರುವಂತೆ ಎಚ್ಚರಿಕೆ ನೀಡಿದರು. ನೂತನ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ಬೋಧಕ ವೈದ್ಯರು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಮಾತು ಕೇಳುತ್ತಿಲ್ಲವಂತೆ, ಮತ್ತೊಂದೆಡೆ ಜಿಲ್ಲಾಸ್ಪತ್ರೆಯ ವೈದ್ಯರು ವೈದ್ಯಕೀಯ ಕಾಲೇಜಿನ ಡೀನ್ ಮಾತು ಕೇಳುತ್ತಿಲ್ಲವಂತೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿರುವ ವೈದ್ಯರುಗಳು ಜಾತಿ ಆಧಾರಿತವಾಗಿ ಗುಂಪುಗಾರಿಕೆ ಮಾಡಿಕೊಂಡಿದ್ದಾರಂತೆ. ಇದರ ಪರಿಣಾಮ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕೂ ಸಚಿವ ಡಾ.ಎಂ.ಸಿ ಸುಧಾಕರ್, ಸೂಕ್ಷ್ಮವಾಗಿ ವಿಚಾರಿಸಿದ್ದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದನ್ನೂ ಓದಿ:ಟಿವಿ9 ಕನ್ನಡ ಡಿಜಿಟಲ್ ವರದಿ ಫಲಶೃತಿ: ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಬೋಧನಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ಅಧಿಕಾರಿಗಳ ಮಧ್ಯೆ ಜಾತಿಗಳ ಮೇಲಾಟ, ಗುಂಪುಗಾರಿಕೆ, ನಿರ್ಲಕ್ಷ್ಯ ಮನೋಭಾವ ಹೆಚ್ಚಾಗಿದೆ ಎನ್ನುವ ಅರೋಪಗಳು ಕೇಳಿಬಂದಿವೆ. ಇದರಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಇನ್ನು ಆಸ್ಪತ್ರೆಯ ಅಂಧ ದರ್ಭಾರ್​ಗೆ ಕಡಿವಾಣ ಹಾಕಬೇಕಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜಾಣಕುರುಡಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ