ಚಿಕ್ಕಬಳ್ಳಾಪುರ: ನಾಳೆ ತಾಲೂಕಿನ ಮುದ್ದೇನಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಸರ್.ಎಂ. ವಿಶ್ವೇಶ್ವರಯ್ಯನವರ ಸಮಾಧಿ ಸೇರಿದಂತೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ತಾವೂ ಸೇರಿ ಮುದ್ದೇನಹಳ್ಳಿ ಗ್ರಾಮದಲ್ಲಿ ಐಐಟಿ ಸ್ಥಾಪನೆ ಕೋರಿ ಮನವಿ ಸಲ್ಲಿಸುವುದಾಗಿ ಸಚಿವ ಡಾಕೆ.ಸುಧಾಕರ್ (k Sudhakar) ಹೇಳಿದರು. ಮುದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮುದ್ದೇನಹಳ್ಳಿ ಸರ್.ಎಂ.ವಿ. ಹುಟ್ಟೂರಾಗಿದ್ದು, ಇಂತಹ ಮಹನೀಯರು ಜನಿಸಿದ ಗ್ರಾಮದಲ್ಲಿ ಪ್ರತಿಷ್ಠಿತ ಸಂಸ್ಥೆಯನ್ನು ಸ್ಥಾಪಿಸಲು ಸಂಬಂಧಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಮುದ್ದೇನಹಳ್ಳಿ ಗ್ರಾಮಕ್ಕೆ ಒಂದು ವೈದ್ಯಕೀಯ ಕಾಲೇಜು ಸಿಕ್ಕಿದ್ದು, ಸತ್ಯ ಸಾಯಿ ವೈದ್ಯಕೀಯ ಕಾಲೇಜು ಶನಿವಾರ ಉದ್ಘಾಟನೆಯಾಗಲಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸತ್ಯ ಸಾಯಿ ವೈದ್ಯಕೀಯ ಕಾಲೇಜು ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಜಿಲ್ಲೆಯ ಬಡವರು ಬೆಂಗಳೂರಿಗೆ ಚಿಕಿತ್ಸೆಗಾಗಿ ಹೋಗಬೇಕಾದ ಅನಿವಾರ್ಯತೆ ಇಲ್ಲ. ಮುದ್ದೇನಹಳ್ಳಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಕ್ಷೇತ್ರವನ್ನು ಮಾದರಿಯಾಗಿ ಮಾಡಲು ಶ್ರಮಿಸುತ್ತಿದ್ದು, ಇದರ ಫಲಿತವಾಗಿ ಈಗಾಗಲೇ ಚಿಕ್ಕಬಳ್ಳಾಪುರ ಪ್ರಸಿದ್ಧಿ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Narendra Modi Visit: ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ; ಗಣಿ ಸ್ಫೋಟ, ಸ್ಪೋಟಕ ಸಾಗಾಟಕ್ಕೆ ನಿರ್ಬಂಧ
ಸಾಂಸ್ಕೃತಿಕ, ಐತಿಹಾಸಿಕ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯನ್ನು ಚಿಕ್ಕಬಳ್ಳಾಪುರ ಮಾಡುತ್ತಿದೆ. ಹಾಗಾಗಿ ಬಿಜೆಪಿಯಲ್ಲಿ ಹಳಬರು, ಹೊಸಬರು ಎಂಬ ಬೇಧವಿಲ್ಲ, ಹೊಸ ನೀರು ಬಂದಾಗ ಹಳೇ ನೀರು ಹೋಗದೆ ಎರಡೂ ನೀರು ಬೆರೆತು ಸಮುದ್ರ ಸೇರಬೇಕು ಆಗಲೇ ಎಲ್ಲ ರೀತಿಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಚಿವರು ಪ್ರತಿಪಾದಿಸಿದರು.
ನಾಳೆ (ಮಾ. 25) ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸ್ಕಂದಗಿರಿ ಚಾರಣಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಈ ಕುರಿತಾಗಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಡಿ.ಎಲ್.ನಾಗೇಶ್, ನರೇಂದ್ರ ಮೋದಿಯವರು ಭೇಟಿ ನೀಡಲಿರುವ ಹಿನ್ನೆಲೆ ಮುದ್ದೇನಹಳ್ಳಿಗೆ ಹೊಂದಿಕೊಂಡಿರುವ ಪ್ರಸಿದ್ದ ಚಾರಣ ಸ್ಥಳವಾದ ಸ್ಕಂದಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Narendra Modi: ನಾಳೆ ರಾಜ್ಯಕ್ಕೆ ಮೋದಿ; ಎಷ್ಟೊತ್ತಿಗೆ ಎಲ್ಲಿ ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ವಿವರ
ನಂದಿ, ತಿರ‍್ನಹಳ್ಳಿ, ಮುದ್ದೇನಹಳ್ಳಿ ಮೂಲಕ ಸ್ಕಂದಗಿರಿಗೆ ರಸ್ತೆ ಇರುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ದೃಷ್ಠಿಯಿಂದ 24-03-2023 ರಂದು ಬೆಳಿಗ್ಗೆ 10 ಗಂಟೆಯಿಂದ 25-03-2023ನೇ ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದರು. ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನಿಂದ ಮಧುಸೂದನ್‌ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮೆಡಿಕಲ್ ಕಾಲೇಜು ತಲೆ ಎತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮೆಡಿಕಲ್ ಕಾಲೇಜು ಉದ್ಘಾಟಿಸಲಿದ್ದಾರೆ. ಮತ್ತೊಂದಡೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳವೂ ಆಗಿರುವ ಮುದ್ದೇನಹಳ್ಳಿಯಲ್ಲಿ ಅವರ ಸಮಾಧಿ ಸ್ಮಾರಕ ಹಾಗೂ ಮ್ಯೂಸಿಯಂ ಇದ್ದು, ಅಲ್ಲಿಗೂ ಸಹ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ವರದಿ: ಭೀಮಪ್ಪ ಪಾಟೀಲ್ ಟಿರ್ವಿ ಚಿಕ್ಕಬಳ್ಳಾಪುರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 pm, Fri, 24 March 23