Narendra Modi Visit: ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ; ಗಣಿ ಸ್ಫೋಟ, ಸ್ಪೋಟಕ ಸಾಗಾಟಕ್ಕೆ ನಿರ್ಬಂಧ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಲ್ಲು, ಕ್ವಾರಿ, ಕ್ರಶರ್‌ಗಳಿಗೆ ಗಣಿಗಾರಿಕೆಗಳ ಸ್ಪೋಟಕ್ಕೆಂದು ಸ್ಫೋಟಕ ಸಾಮಗ್ರಿಗಳನ್ನು ಸರಬರಾಜು ಮಾಡುವ ಅಧಿಕೃತ ಗುತ್ತಿಗೆದಾರರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಾರ್ಚ್ 27ರಂದು ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಬಂಡಹಳ್ಳಿ ಕ್ರಾಸ್ ಬಳಿ ಸರ್ಕಾರಿ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಾರ್ಚ್ 22 ರಿಂದ ಮಾರ್ಚ್ 27ರವರೆಗೂ ಸ್ಫೋಟಕ ಸಾಮಗ್ರಿಗಳ ಸಾಗಾಟ ಸೇರಿದಂತೆ ಕಲ್ಲು, ಕ್ವಾರಿ, ಕ್ರಷರ್‌ಗಳಲ್ಲಿ ಗಣಿಗಾರಿಕೆ ಸ್ಪೋಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಲ್ಲು, ಕ್ವಾರಿ, ಕ್ರಶರ್‌ಗಳಿಗೆ ಗಣಿಗಾರಿಕೆಗಳ ಸ್ಪೋಟಕ್ಕೆಂದು ಸ್ಫೋಟಕ ಸಾಮಗ್ರಿಗಳನ್ನು ಸರಬರಾಜು ಮಾಡುವ ಅಧಿಕೃತ ಗುತ್ತಿಗೆದಾರರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದಾರೆ. ಕಲ್ಲು, ಕ್ವಾರಿ, ಕ್ರಶರ್‌ಗಳಲ್ಲಿ ಸ್ಪೋಟಕಗಳನ್ನು ಇಟ್ಟು ಬಂಡೆ ಸಿಡಿಸಿದರೆ ಸ್ಫೋಟಕ ಸಾಮಗ್ರಿಗೆ ಸಂಬಂಧಿಸಿದ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಯಾರಿಗೆಲ್ಲೆ ನೋಟೀಸ್ ಜಾರಿ?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಕಲ್ಲು, ಕ್ವಾರಿ, ಕ್ರಶರ್‌ಗಳಿಗೆ ಮೂವರು ಅಧಿಕೃತ ಗುತ್ತಿಗೆದಾರರು ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಸರಬರಾಜು ಮಾಡುತ್ತಾರೆ. ಬಾಗೇಪಲ್ಲಿ ತಾಲ್ಲೂಕಿನ ಪುಟ್ಟಪರ್ತಿ ಬಳಿ ಇರುವ ಶಿವನಾರಾಯಣ ಎಂಟರ್‌ಪ್ರೈಸೆಸ್, ಚಪ್ಪರದಹಳ್ಳಿ ಬಳಿ ಇರುವ ಪವನ್ ಬ್ಲಾಕ್ ರಾಕ್ ಸರ್ವೀಸ್ ಹಾಗೂ ಯರಮಾರನಹಳ್ಳಿ ಬಳಿ ಇರುವ ಎಸ್.ವಿ.ಎಲ್.ಎಸ್. ಎಕ್ಸಪ್ಲೊಸೀವ್ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗಿದೆ.
ಬೆಳಿಗ್ಗೆ ಸುಮಾರು 10.50ಕ್ಕೆ ಚಿಕ್ಕಬಳ್ಳಾಪುರಕ್ಕೆ ತಲುಪಲಿರುವ ಮೋದಿ, 11.15ಕ್ಕೆ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಕಾರ್ಯಕ್ರಮದ ನಿಮಿತ್ತ ಜಿಲ್ಲೆಯದಾದ್ಯಂತ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
– ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ