ಆತ ಬಡ ರೈತ (Farmer), ತನಗಿರುವ ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು (Coriander Crop) ಬೆಳೆದಿದ್ದ. ಇನ್ನೇನು ಒಂದು ದಿನ ಬಿಟ್ಟಿದ್ರೆ… ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕಿತ್ತು. ಅಷ್ಟರಲ್ಲೆ… ಅದ್ಯಾರ ಕಣ್ಣು ಬಿತ್ತೊ ಏನೋ… ರಾತ್ರೋರಾತ್ರಿ ಕೊತ್ತಂಬರಿ ತೋಟಕ್ಕೆ ವಿಷ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ತೋಟದಲ್ಲಿದ್ದ ಕೊತ್ತಂಬರಿ ಸೊಪ್ಪು ಒಣಗಿ ಹೋಗಿದೆ. ಈ ಕುರಿತು ಒಂದು ವರದಿ. ಹುಲುಸಾಗಿ ಬೆಳೆದು ನಿಂತ ಕೊತ್ತಂಬರಿ ಸೊಪ್ಪಿನ ಮೇಲೆ ವಕ್ರದೃಷ್ಟಿ ಬೀರಿದ ದುಷ್ಕರ್ಮಿಗಳು (Miscreants) ಕಟಾವಿಗೆ ಬಂದಿದ್ದ ಕೊತ್ತಂಬರಿ ಸೊಪ್ಪಿನ ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿ (Pesticides) ರೈತನ ಕಣ್ಣಲ್ಲಿ ನೀರು ಹಾಕಿಸಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆಸಲಪರ್ತಿ ಗ್ರಾಮದ ಬಡ ರೈತ ಶ್ರೀನಿವಾಸ್ ತೋಟದಲ್ಲಿ.
ಹೌದು! ಶ್ರೀನಿವಾಸ್ ತನ್ನ ಒಂದು ಎಕರೆ 27 ಗುಂಟೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಬಂಡವಾಳ ಹಾಕಿ ಹನಿ ನೀರಾವರಿ ಮೂಲಕ ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇತ್ತು, ಒಂದೂವರೆ ಲಕ್ಷ ರೂಪಾಯಿಗೆ ಕೊತ್ತಂಬರಿ ಸೊಪ್ಪು ತೋಟ ಮಾರಾಟ ಮಾಡಿದ್ದ. ಗುತ್ತಿಗೆ ಪಡೆದವರು ಆಗಮಿಸಿ ಕೊತ್ತಂಬರಿ ಸೊಪ್ಪು ಕೀಳುವುದಕ್ಕೂ ಮುನ್ನ ದುಷ್ಕರ್ಮಿಗಳು ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪು ಒಣಗಿದೆ.
ಶ್ರೀನಿವಾಸ್ ತೋಟದಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪುನ್ನು ಗುತ್ತಿಗೆ ಪಡೆದಿದ್ದ, ಕೊತ್ತಂಬರಿ ಸೊಪ್ಪು ವ್ಯಾಪಾರಿ ಶ್ರೀಧರ್ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಒಂದು ಎಕರೆಯಲ್ಲಿ ಬಹುತೇಕ ಕೊತ್ತಂಬರಿ ಸೊಪ್ಪು ಬೆಳೆಗೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಉಳಿದ ಕೊತ್ತಂಬರಿ ಸೊಪ್ಪನ್ನು ಕೀಳುತ್ತಿದ್ದೇವೆ. ಹಾಕಿದ ಬಂಡವಾಳ ಬರಲ್ಲ. ರೈತ ಮುಂಗಡ ಹಣ ವಾಪಸ್ ಕೊಡುವುದಿಲ್ಲ ಎನ್ನುತ್ತಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.
ರೈತನ ಮೇಲಿನ ದ್ವೇಷವೊ… ಇಲ್ಲಾ ಜಮಿನು ವಿವಾದವೊ ಗೊತ್ತಿಲ್ಲ. ಆದ್ರೆ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ ಮಾಡಿ, ರೈತನ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ವಿಪರ್ಯಾಸ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ