ಚಿಕ್ಕಬಳ್ಳಾಪುರ: ಕಂದಾಯ ಇಲಾಖೆಯ ತಾಲ್ಲೂಕು ಕಚೇರಿ ಎಂದರೆ ಆ ದಾಖಲೆ ಬೇಕು, ಈ ದಾಖಲೆ ಬೇಕು ಅಂತ ಪ್ರತಿದಿನ ಸಾವಿರಾರು ಜನ ಸಾರ್ವಜನಿಕರು ಆಗಮಿಸುವುದು ಸಹಜ. ಆದರೆ ಇಲ್ಲೊಂದು ತಾಲ್ಲೂಕು ಕಚೇರಿಗೆ ಪ್ರತಿದಿನ ವಿಶೇಷ ಅತಿಥಿಗಳು ಆಗಮಿಸಿ, ತಮ್ಮ ಹಾಜರಿ ಹಾಕುತ್ತಾರೆ. ಅಷ್ಟಕ್ಕೂ ಆ ವಿಶೇಷ ಅತಿಥಿಗಳಾದರೂ ಯಾರು ಅಂತ ಗೊತ್ತಾ?
ಇದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ತಾಲ್ಲೂಕು ಕಛೇರಿ (gauribidanur tahsildar office), ಗೌರಿಬಿದನೂರು-ಬೆಂಗಳೂರು ರಸ್ತೆಯಲ್ಲಿದೆ. ವಿಧಾನಸೌಧಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಇನ್ನು ಇಲ್ಲಿರುವ ತಹಶೀಲ್ದಾರ್ ಹೆಚ್.ಶ್ರೀನಿವಾಸ್, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿಧ ತಾಲ್ಲೂಕು ಮಟ್ಟದ ಕಛೇರಿಗಳನ್ನು ಹುಡುಕಿಕೊಂಡು ಸಾವಿರಾರು ಜನ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಈ ಕಛೇರಿಗೆ ಜನಗಳು ಬರುವುದು ವಿಶೇಷವಲ್ಲ. ಆಂಜನೇಯ ದಂಡು, ಮಂಗಗಳ ಹಿಂಡು ಈ ಕಛೇರಿಗೆ ಬರುತ್ತಿರುವುದು ವಿಶೇಷವಾಗಿದೆ (Monkey menace).
ತಾಲ್ಲೂಕು ಕಛೇರಿಯನ್ನೇ ಆವಾಸಸ್ಥಾನ ಮಾಡಿಕೊಂಡ ಮಂಗಗಳ ಹಿಂಡು
ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳನ್ನು ಹುಡುಕಿಕೊಂಡು ಗೌರಿಬಿದನೂರು ತಾಲ್ಲೂಕು ಕಛೇರಿಗೆ ಬಂದರೆ, ಅಧಿಕಾರಿ, ಸಿಬ್ಬಂದಿ ಕಾಣಿಸದಿದ್ದರೂ ಕಛೇರಿಯ ಒಳ ಮತ್ತು ಹೊರಗೆ ಕೋತಿಗಳ ದಂಡು ಕಾಣಿಸುತ್ತೆ. ಕಛೇರಿಯ ಮೆಟ್ಟಿಲುಗಳು, ಹಾಲ್‌ಗಳಲ್ಲಿ ಕೋತಿಗಳ ಕಾರುಬಾರು ನಡದೇ ಇರುತ್ತೆ. ಎತ್ತ ಕಣ್ಣು ಹಾಸಿದರೂ ಕೋತಿಗಳ ಉಪಟಳ, ಕಿಕ್ಕಿರಿಕ್ಕಿ ಎಂದು ಹಲ್ಲು ಕಿರಿದು ಒಂದಕ್ಕೊಂದು ಕ್ಯಾತೆ ತೆಗೆಯುವ ಕೋತಿಗಳ ಜಗಳ, ತರಳೆ, ತಮಾಷೆ ಮಾಡುವುದು, ಜೊತೆಗೆ ಜನ್ಮತಃ ಬಂದಿರುವ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜಂಪಿಂಗ್, ರನ್ನಿಂಗ್, ವಾಕಿಂಗ್ ಎಲ್ಲಾ ಸಾಮಾನ್ಯವಾಗಿರುತ್ತೆ.
ಕೈಯಲ್ಲಿರುವ ಕವರ್‌ನ್ನು ಕೊಡುವವರೆಗೂ ಬಿಡಲ್ಲ
ಇನ್ನು ಅಧಿಕಾರಿ, ಸಿಬ್ಬಂದಿಯನ್ನು ಹುಡುಕಿಕೊಂಡು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಗ್ರಾಮೀಣ ಜನರು ಬರುವಾಗ ಬ್ಯಾಗ್‌ನಲ್ಲಿ ಊಟ, ತಿಂಡಿ, ನೀರು ತರುವುದು ಸಹಜ. ತಾಲ್ಲೂಕು ಕಛೇರಿಗೆ ಆಗಮಿಸುತ್ತಿದ್ದಂತೆ ಕಛೇರಿಯ ವರಾಂಡದಲ್ಲಿರುವ ಕೋತಿಗಳ ಉಪಟಳ ಹೇಳತೀರದು. ಕೈಯಲ್ಲಿ ಅಥವಾ ಬೆನ್ನಲ್ಲಿ ಬ್ಯಾಗ್ ನೋಡಿದ್ದೆ ತಡ, ಕೋತಿಗಳು ಮೈಮೇಲೆ ಎಗರುತ್ತವೆ. ಇನ್ನು ಇತ್ತೀಚಿಗೆ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ಮಹಿಳೆಯನ್ನು ಅಟ್ಟಿಸಿಕೊಂಡು ಹೋದ ಘಟನೆಯೂ ನಡೆಯಿತು.
ಕೋತಿ ಕಾಟಕ್ಕೆ ಸಿಬ್ಬಂದಿ ಸುಸ್ತು
ಗೌರಿಬಿದನೂರು ತಾಲ್ಲೂಕು ಕಛೇರಿಯಲ್ಲಿ ಜನರು ಬಂದು ಹೋಗುವುದಕ್ಕಿಂತಲೂ ಹೆಚ್ಚಾಗಿ ಕಛೇರಿಗೆ ಬಂದು ಹೋಗುವ ಕೋತಿಗಳ ಉಪಟಳ ಹೆಚ್ಚಾಗಿದೆ. ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಬ್ಯಾಗ್‌ಗಳನ್ನು ಹೊತ್ತೊಯ್ಯುವ ಪ್ರಕರಣ, ಊಟ, ತಿಂಡಿಯ ಬಾಕ್ಸ್ ಎಳೆದಾಡುವ ಪ್ರಕರಣ ನಡೆದಿವೆ. ಇದರಿಂದ ಸುಸ್ತಾಗಿರುವ ಗೌರಿಬಿದನೂರು ತಹಶೀಲ್ದಾರ್ ಹೆಚ್.ಶ್ರೀನಿವಾಸ್ ಈಗ ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಕಛೇರಿಯ ಕಿಟಕಿಗಳಿಗೆ ಮೆಶ್ ಅಳವಡಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಗೌರಿಬಿದನೂರು ತಾಲ್ಲೂಕು ಕಛೇರಿಯಲ್ಲಿ ವಾನರ ಸೈನ್ಯದಿಂದ ಅಧಿಕಾರಿ, ಸಿಬ್ಬಂದಿಗಳು ಸುಸ್ತಾಗಿದ್ದಾರೆ.
– ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ