ಚಿಕ್ಕಬಳ್ಳಾಪುರ: ಅಯೋಧ್ಯೆಯ ಶ್ರೀರಾಮನು ಸೀತೆ, ಲಕ್ಷ್ಮಣನ ಜೊತೆಗೂಡಿ ಬಂದಿದ್ದಾಗ ಅದೊಂದು ಬೆಟ್ಟಕ್ಕೆ ಆಗಮಿಸಿ ಅಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಇನ್ನು ರಾವಣನ ಸಂಹಾರದ ನಂತರ ದೋಷ ಪರಿಹಾರಕ್ಕಾಗಿ ಪ್ರತಿಷ್ಠಾಪನೆ ಮಾಡಿರುವ ಲಿಂಗಗಳಲ್ಲಿ ಅಲ್ಲಿರುವ ಬೆಟ್ಟದ ಮೇಲೆ ಸ್ವತಃ ಶ್ರೀರಾಮನೇ ತನ್ನ ಕೈಯಿಂದ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆಂದು ಪ್ರತೀತಿ ನಂಬಿಕೆಯಿದೆ. ಇನ್ನು ಅಲ್ಲಿಯ ಬೆಟ್ಟದ ಮೇಲೆ ರಾಮ, ಲಕ್ಷ್ಮಣ, ಸೀತೆಯ ತೀರ್ಥಗಳಿದ್ದು, ರಾಮ ಲಕ್ಷ್ಮಣ ಸೀತೆಯ ಹೆಜ್ಜೆ ಗುರುತು ಹೇಳುತ್ತಿವೆ.
ಅಷ್ಟಕ್ಕೂ ಅದ್ಯಾವ ಬೆಟ್ಟ:
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣಕ್ಕೆ ಹೊಂದಿಕೊಂಡಂತೆ ಐತಿಹಾಸಿಕ, ಪುರಾಣ ಪ್ರಸಿದ್ದ, ಆಧ್ಯಾತ್ಮಿಕ ತಾಣ, ಪ್ರವಾಸಿ ತಾಣವೂ ಆಗಿರುವ ಸುರಸದ್ಮಗಿರಿ ಎನ್ನುವ ಬೆಟ್ಟವಿದೆ. ಇದೇ ಬೆಟ್ಟ ಇತ್ತೀಚಿನ ದಿನಗಳಲ್ಲಿ ಗುಡಿಬಂಡೆ ಬೆಟ್ಟವೆಂದು ಖ್ಯಾತಿಯಾಗಿದೆ. ಇದೇ ಬೆಟ್ಟದಲ್ಲಿ ತ್ರೇತಾಯುಗದಲ್ಲಿ ಅಯೋಧ್ಯೆಯ ಶ್ರೀರಾಮ, ರಾವಣನ ಸಂಹಾರ ದೋಷ ನಿವಾರಣೆಗಾಗಿ ತನ್ನ ಕೈಯಾರ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನುವ ಮಾತಿದೆ.
ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನೇ ಪ್ರತಿಷ್ಠಾಪಿಸಿದ್ದಾನಂತೆ:
ಸೀತೆ, ಲಕ್ಷ್ಮಣನ ಜೊತೆಗೂಡಿ ಶ್ರೀರಾಮ ಗುಡಿಬಂಡೆ ಬೆಟ್ಟಕ್ಕೆ ಬಂದಿದ್ದಾಗ ಬೆಟ್ಟದ ಮೇಲೆ ತಮ್ಮ ಕೈಯಾರೆ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ರು ಎನ್ನುವ ನಂಬಿಕೆಯಿದೆ. ಅದರ ಸಾಕ್ಷಿಯಾಗಿ ಇಂದಿಗೂ ಬೆಟ್ಟದ ಮೇಲೆ ಶ್ರೀರಾಮಲಿಂಗೇಶ್ವರ ದೇವಸ್ಥಾನ ಇರುವುದನ್ನು ಕಾಣಬಹುದಾಗಿದೆ.
ರಾಮ, ಲಕ್ಷ್ಮಣ, ಸೀತೆಯ ತೀರ್ಥಗಳಿವೆ:
ಇನ್ನು ಅಯೋಧ್ಯೆಯ ಶ್ರೀರಾಮ ಸೀತೆ, ಲಕ್ಷ್ಮಣರು ಗುಡಿಬಂಡೆ ಬೆಟ್ಟದ ಮೇಲೆ ಬಂದಾಗ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರಂತೆ. ಆಗ ನೀರಿಗಾಗಿ ಸೃಷ್ಟಿಸಿರುವ ರಾಮ, ಲಕ್ಷ್ಮಣ, ಸೀತೆಯ ತೀರ್ಥಗಳನ್ನು ಈಗಲೂ ಕಾಣಬಹುದಾಗಿದೆ.
ಗುಡಿಬಂಡೆ ಬೆಟ್ಟದಲ್ಲಿ ನಿಧಿಗಳ್ಳರ ಆವಳಿ:
ಇನ್ನು ಗುಡಿಬಂಡೆ ಬೆಟ್ಟದ ಇತಿಹಾಸ, ಶ್ರೀರಾಮನು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿರುವ ಬಗ್ಗೆ ಹಲವು ಪುರಾಣಗಳಲ್ಲಿ ಉಲ್ಲೇಖವಿದೆ. ನಿಧಿಗಳ್ಳರು ಕೆಲವು ವರ್ಷಗಳ ಹಿಂದೆ ರಾಮ ಪ್ರತಿಷ್ಠಾಪನೆ ಮಾಡಿದ್ದ ಶಿವಲಿಂಗವನ್ನು ಒಡೆದು, ನಿಧಿ ಶೋಧ ಮಾಡಿದ್ದಾರಂತೆ. ನಂತರ ಬೇರೊಂದು ಶಿವಲಿಂಗವನ್ನು ಸ್ಥಳೀಯರು ಪ್ರತಿಷ್ಠಾಪಿಸಿ ರಾಮನ ಹೆಸರಿನಲ್ಲಿ ಪ್ರತಿದಿನ ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:27 pm, Tue, 16 January 24